ರಾಜಾಜಿನಗರದ (Rajajinagar) ನಿವಾಸಿ ಮತ್ತು ಸ್ಟೋರ್ ಮ್ಯಾನೇಜರ್ ಆಗಿದ್ದ ಫರ್ದೀನ್ ಖಾನ್ (23) ಅವರ ಮೆದುಳು ನಿಷ್ಕಯಗೊಂಡಿದ್ದು, ಅಂಗಾಂಗಳನ್ನು ದಾನ ಮಾಡುವ ಮೂಲಕ ಫರ್ದೀನ್ ಅವರ ಕುಟುಂಬ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಫರ್ದೀನ್ ಖಾನ್ ಅವರು ಇತ್ತೀಚೆಗೆ ತುಮಕೂರಿನ ಸಿರಾದಿಂದ ಬೆಂಗಳೂರಿಗೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಪರಿಣಾಮ ಅವರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅವರ ಸ್ಥಿತಿ ಚಿಂತಾಜನಕವಾಗುತ್ತಿದ್ದಂತೆ ಜೂನ್ 5 ರಂದು ಬೆಳಗಿನ ಜಾವ 1.30 ರ ಹೊತ್ತಿಗೆ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಕೆಲವು ಗಂಟೆಗಳ ನಂತರ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದರು.
ವಿಷಯ ತಿಳಿದು ದುಃಖದಲ್ಲಿದ್ದ ಕುಟುಂಬ ಏಕೈಕ ಪುತ್ರ ಫರ್ದೀನ್ ಅವರ ಅಂಗಾಂಗಳನ್ನು ದಾನ ಮಾಡಿದೆ. ಈ ಮೂಲಕ ಆರು ಜನರಿಗೆ ಮರು ಜನ್ಮನೀಡಿತು. ಯಶವಂತಪುರದ ಸ್ಪರ್ಶ ಆಸ್ಪತ್ರೆಯಲ್ಲಿ ಫರ್ದೀನ್ ಅವರ ಬಲ ಮೂತ್ರಪಿಂಡ ಮತ್ತು ಯಕೃತ್ತನ್ನು ಯಶಸ್ವಿಯಾಗಿ ರೋಗಿಗಳಿಗೆ ಕಸಿ ಮಾಡಲಾಗಿದ್ದು, ಅವರ ಹೃದಯವನ್ನು ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಗಿದೆ. ಅವರ ಎಡ ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿಯನ್ನು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ಮತ್ತು ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ಕಳುಹಿಸಲಾಗಿದೆ. ಈ ನಿರ್ಧಾರ ಶ್ಲಾಘನೀಯ. ಅಂಗಾಂಗ ದಾನದಿಂದ ಮತ್ತೊಬ್ಬರಿಗೆ ಮರು ಜನ್ಮನೀಡಿದಂತಾಗುತ್ತದೆ ಎಂದು ಸ್ಪರ್ಶ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಗ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


