ಕೊರಟಗೆರೆ: ಮಾನವ ಜೀವನ ಉನ್ನತಿಗೆ ಗೊತ್ತು ಗುರಿಗಳಿರಬೇಕು. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ವ್ಯರ್ಥವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಸಿದ್ಧರಬೆಟ್ಟ ಕ್ಷೇತ್ರದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಶ್ರೀ ಜಗದ್ಗುರು ರೇಣುಕ-ಬಸವ ಜಯಂತಿ, ಸಾಮೂಹಿಕ ವಿವಾಹ, ವೀರಭದ್ರ ಶ್ರೀಗಳವರ ಪಟ್ಟಾಧಿಕಾರದ 17ನೇ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಾರತೀಯ ಸಂಸ್ಕøತಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಶಾಂತಿ ಸುಖದಾಯಕ ಬದುಕಿಗೆ ಧರ್ಮದ ಅರಿವು ಆಚರಣೆ ಅಗತ್ಯವಾಗಿದೆ. ಬದುಕು ಭಗವಂತ ಕೊಟ್ಟ ಕೊಡುಗೆಯಲ್ಲಿ ಮನುಷ್ಯ ಕಲಿಯುವ ಪಾಠಗಳಿವೆ. ಅನುಭವಿಸುವ ವಿಚಾರ ಧಾರೆಗಳಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಶ್ರೀ ಬಸವೇಶ್ವರರು ವೀರಶೈವ ಧರ್ಮ ಸಂಸ್ಕøತಿಯ ಸಂವರ್ಧನೆಗಾಗಿ ಶ್ರಮಿಸಿದ ಮಹಾಚೇತನ. ಅವರು ತೋರಿದ ದಾರಿಯಲ್ಲಿ ನಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಗೃಹಸ್ಥಾಶ್ರಮ ಅತ್ಯಂತ ಪವಿತ್ರವಾದುದು. ಸತಿ ಪತಿಗಳು ಪರಸ್ಪರ ಅರಿವು ಸಾಮರಸ್ಯದಿಂದ ಬಾಳಿದರೆ ಜೀವನ ಉಜ್ವಲಗೊಳ್ಳುತ್ತದೆ. ಸಾಮೂಹಿಕ ವಿವಾಹ ಸಮಾರಂಭದಿಂದ ದುಂದು ವೆಚ್ಚ ತಡೆಗಟ್ಟಲು ಸಾಧ್ಯವಾಗುತ್ತದೆ.
17 ಜೋಡಿ ನವ ದಂಪತಿಗಳು ಪವಿತ್ರವಾದ ಗೃಹಸ್ಥಾಶ್ರಮದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಅವರೆಲ್ಲರ ಬಾಳ ಬದುಕು ಸಮೃದ್ಧಗೊಳ್ಳಲೆಂದು ಹರಿಸಿದ ಜಗದ್ಗುರುಗಳು ಮಠಾಧ್ಯಕ್ಷರಾದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಧರ್ಮ ಮುಖಿಯಾಗಿ ಸಮಾಜ ಮುಖಿಯಾಗಿ 17 ವರುಷಗಳಿಂದ ಶ್ರಮಿಸುತ್ತಿರುವುದನ್ನು ಕಂಡು ಎಲ್ಲರಿಗೂ ಸಂತೋಷವಾಗಿದೆ. ಶ್ರೀಗಳಿಂದ ಈ ಭಾಗದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳು ನೆರವೇರಲೆಂದು ಶುಭ ಹಾರೈಸಿದರು.
ಸಮಾರಂಭವನ್ನು ಉದ್ಘಾಟಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ ವೀರಭದ್ರ ಶ್ರೀಗಳು ಪ್ರತಿ ವರುಷ ಈ ಕ್ಷೇತ್ರದಲ್ಲಿ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ಸಾಮರಸ್ಯ ಸದ್ಭಾವನೆ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಅವರು ಕೈಗೊಳ್ಳುವ ಎಲ್ಲ ಜನಹಿತ ಕಾರ್ಯಗಳಿಗೆ ನಮ್ಮೆಲ್ಲರ ಬೆಂಬಲ ಸಹಕಾರ ಸದಾ ಇದೆ ಎಂದರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಡೆಯೂರು ರೇಣುಕ ಶಿವಾಚಾರ್ಯರು, ಎಲೆರಾಂಪುರ ಡಾ.ಹನುಮಂತನಾಥ ಸ್ವಾಮಿಗಳು, ಬೆಳ್ಳಾವಿ ವೀರಬಸವ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ಹಲಕರಟಿ ಮುನೀಂದ್ರ ಶ್ರೀಗಳು, ಕಲ್ಕೇರಿ ಸಿದ್ಧರಾಮ ಶ್ರೀಗಳು, ತಂಗನಹಳ್ಳಿ ಬಸವಲಿಂಗ ಶ್ರೀಗಳು, ಹತ್ತಿಕಣಬಸ ಪ್ರಭುಶಾಂತ ಶ್ರೀಗಳವರು ಪಾಲ್ಗೊಂಡು 50 ಜನ ವೀರಮಾಹೇಶ್ವರ ಮತ್ತು ಭಕ್ತರಿಗೆ ಅಯ್ಯಾಚಾರ ಶಿವದೀಕ್ಷೆ ನೆರವೇರಿಸಿದರು.
ರೈತರಿಗೆ ಸಸಿ ವಿತರಿಸಿ ರೈತಪರ ಚಿಂತನಗಳನ್ನು ಮನವರಿಕೆ ಮಾಡಿಕೊಟ್ಟರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ನೇತೃತ್ವ ವಹಿಸಿದ ಮಠಾಧ್ಯಕ್ಷರಾದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶ್ರೀ ಕ್ಷೇತ್ರದಲ್ಲಿ ಪ್ರತಿ ವರುಷ ಜರುಗುತ್ತಿರುವ ಧರ್ಮ ಕಾರ್ಯಗಳಿಗೆ ಭಕ್ತರ ಹೆಚ್ಚಿನ ಸಹಕಾರ ದೊರೆಯುತ್ತಿರುವುದು ಸಂತೋಷದ ಸಂಗತಿ. ಬದುಕಿ ಬಾಳುವ ಜನಾಂಗಕ್ಕೆ ಒಳಿತಾಗಬೇಕೆಂಬ ಉದ್ದೇಶದಿಂದ ಜನಹಿತ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೇವೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಮತ್ತು ಭಕ್ತರ ಸಹಕಾರದಿಂದ ಜೀವನ ಪರ್ಯಂತರ ಧರ್ಮ ಸಂಸ್ಕøತಿಯ ಪುನರುತ್ಥಾನಕ್ಕಾಗಿ ಶ್ರಮಿಸುವ ಸಂಕಲ್ಪ ನಮ್ಮದಾಗಿದೆ ಎಂದರು.
ಸಿದ್ಧಗಿರಿ ನಂಜುಂಡಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿತು.
ವರದಿ: ಮಂಜುಸ್ವಾಮಿ ಎಂ ಎನ್ ಕೊರಟಗೆರೆ


