ಖಾಸಗಿ ಆಸ್ಪತ್ರೆಗಳಿಗೆ ಸಮಾನವಾದ ಸೇವೆ ಸಿಗುವಂತೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಸಮಿತಿ ನೇತೃತ್ವದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಶುಶ್ರೂಷಕರಿಗೆ ‘ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
‘ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಶುಶ್ರೂಷಕರು ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಶುಶ್ರೂಷಕರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಆದರೆ, ಕಾರ್ಯನಿರ್ವಹಣೆಯ ವಿಧಾನ ಮತ್ತು ಶಿಸ್ತಿನಲ್ಲಿ ವ್ಯತ್ಯಾಸ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಶಿಸ್ತು ತಂದರೆ ಸುಧಾರಣೆ ಸಾಧ್ಯವಾಗಲಿದೆ. ಆ ದಿಕ್ಕಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ’ ಎಂದರು.
ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಶ್ರೀಮಂತರೂ ಚಿಕಿತ್ಸೆ ಪಡೆಯುತ್ತಾರೆ. ಅಲ್ಲಿ ಶಿಸ್ತು ಇರುವುದಕ್ಕೆ ಎಲ್ಲರೂ ಹೋಗುತ್ತಾರೆ. ಅದೊಂದು ಮಾದರಿ ಆಸ್ಪತ್ರೆ. ಅಲ್ಲಿ ಸಾಧ್ಯವಾಗುವುದು ಇತರ ಸರ್ಕಾರಿ ಆಸ್ಪತ್ರೆಗಳಲ್ಲಿ ಏಕೆ ಸಾಧ್ಯ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಶುಶೂಷಕರು ವೈದ್ಯಕೀಯ ಕ್ಷೇತ್ರದ ಆಧಾರ ಸ್ತಂಭ ಇದ್ದಂತೆ. ವೈದ್ಯರು ರೋಗಿಯನ್ನು ಪರೀಕ್ಷಿಸಿ, ಸಮಸ್ಯೆ ಅರಿತು ಔಷಧಿ ಸೂಚಿಸುತ್ತಾರೆ. ಅದನ್ನು ಕಾಲಕಾಲಕ್ಕೆ ಕೊಟ್ಟು, ರೋಗಿಗಳಲ್ಲಿ ಧೈರ್ಯ ತುಂಬುವವರು ಶುಶೂಷಕರು. ಅವರ ಬೆಂಬಲದಿಂದಲೇ ಕ್ಯಾನ್ಸರ್ ವಿರುದ್ಧ ಜಯ ಗಳಿಸಿದವರೂ ಇದ್ದಾರೆ ಎಂದು ಶ್ಲಾಘಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಸಮಿತಿ ಅಧ್ಯಕ್ಷ ಐವಾನ್ ನಿಗ್ಲಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಆಯುಕ್ತ ಡಿ. ರಂದೀಪ್, ನಿರ್ದೇಶಕಿ ಇಂದುಮತಿ, ಪ್ರಶಸ್ತಿ ಸಮಿತಿ ಉಪಾಧ್ಯಕ್ಷರಾದ ಜೈಜೋ ಜೋಸೆಫ್, ಕರ್ನಾಟಕ ನರ್ಸಿಂಗ್ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಸ್.ಶಿವಕುಮಾರ್, ಕೆಂಪೇಗೌಡ ನರ್ಸಿಂಗ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲೆ ಡಾ.ವಿ.ಟಿ.ಲಕ್ಷಮ್ಮ ಅಂಗ್ಲೋ ಇಂಡಿಯನ್ ಯುನಿಟಿ ಸೆಂಟರ್ ಉಪಾಧ್ಯಕ್ಷೆ ಲೌಸಾ ಎಡ್ವರ್ಡ್ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


