ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಮಹಾನಗರ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಬಾರದು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್.ಆರ್.ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.
ಒಂದು ಸುಂದರ- ಸುಸಜ್ಜಿತ ನಗರವನ್ನು ನಿರ್ಮಾಣ ಮಾಡಬೇಕೆಂಬುದು ನಾಡಪ್ರಭು ಕೆಂಪೇಗೌಡರ ಮಹತ್ವಾಕಾಂಕ್ಷೆಯಾಗಿತ್ತು. ವಿಜಯನಗರ ಸಾಮ್ರಾಜ್ಯದ ಅರಸ ಅಚ್ಯುತರಾಯರು ನಾಡಪ್ರಭು ಕೆಂಪೇಗೌಡರಿಗೆ ಬೆಂಗಳೂರು ಮಹಾನಗರ ನಿರ್ಮಾಣಕ್ಕೆಂದು 12 ಹೋಬಳಿಗಳನ್ನು (ಹಳೇ ಬೆಂಗಳೂರು, ವರ್ತೂರು,ಯಲಹಂಕ, ಬೇಗೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕುಂಬಳಗೋಡು, ಕಾಗಳ್ಳಿ, ಬಾಣಾವಾರ ಮತ್ತು ಹೆಸರುಘಟ್ಟ) ಜಹಗೀರಾಗಿ ನೀಡಿರುವುದು ಇತಿಹಾಸದಲ್ಲಿ ದಾಖಲಾಗಿರುತ್ತದೆ. ಮುಂದೆ ಬೆಂಗಳೂರು ಮಹಾನಗರ ಬೃಹದಾಕಾರವಾಗಿ ಬೆಳೆಯುವ ಮುನ್ಸೂಚನೆಯನ್ನು ಅರಿತಿದ್ದ ಕೆಂಪೇಗೌಡರು ಎಲ್ಲ 12 ಹೋಬಳಿಗಳ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಕೆರೆ – ಕುಂಟೆಗಳನ್ನು, ಗಡಿ ಗೋಪುರಗಳನ್ನು ನಿರ್ಮಿಸಿರುತ್ತಾರೆ. ಇಂತಹ ಬೆಂಗಳೂರನ್ನು ವಿಭಜಿಸುವುದು ಅಥವಾ ಆಡಳಿತಾತ್ಮಕವಾಗಿ ಸರಿಯಲ್ಲ ಎಂದು ರಮೇಶ್ ಹೇಳಿದ್ದಾರೆ.
‘ದೆಹಲಿ ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕವಾಗಿ ಮೂರು ಭಾಗಗಳಾಗಿ ವಿಭಜಿಸಿ ಆಗಿರುವ ಅನಾಹುತಗಳ ಬಗ್ಗೆ ತಮಗೆ ಅರಿವು ಇದೆ ಎಂದು ಭಾವಿಸುತ್ತೇನೆ. ತಾವು ಈ ರೀತಿ ವಿಭಜನೆ ಮಾಡಿದರೆ, ಪ್ರಾದೇಶಿಕವಾಗಿ ಆರ್ಥಿಕ ಅಸಮತೋಲನ ಹೆಚ್ಚಾಗುತ್ತದೆಯೇ ಹೊರತು ಇದರಿಂದ ಬೆಂಗಳೂರಿಗೆ ಒಳಿತಾಗುವ ಕೆಲಸ ಕಾರ್ಯಗಳಾಗುವುದಿಲ್ಲ’ ಎಂದಿದ್ದಾರೆ. ‘ಕನ್ನಡಿಗರಿಗೆ ವಿಶೇಷವಾದ ಭಾವನಾತ್ಮಕ ಸಂಬಂಧ ಇರುವ ಹಾಗೂ ನಾಡಪ್ರಭು ಕೆಂಪೇಗೌಡರು ಕಟ್ಟಿರುವ ಬೆಂಗಳೂರು ಮಹಾನಗರವನ್ನು ವಿಭಜಿಸುವುದು ಮಾನ್ಯಕೆಂಪೇಗೌಡರಿಗೆ ಮಾಡಿದ ಅವಮಾನವಾಗುತ್ತದೆ ಹಾಗೂ ಕನ್ನಡಿಗರ ಭಾವನೆಗಳನ್ನು ಕೆಣಕಿದಂತಾಗುತ್ತದೆ. ಬೆಂಗಳೂರಿನ ಸಮಾಜದ ಸ್ಯಾಸ್ಥವನ್ನು ಹಾಳುಗೆಡವುವ ಕಾರ್ಯಕ್ಕೆ ಕೈ ಹಾಕಬಾರದು. ‘ಏಕ ಬೆಂಗಳೂರು ಮಹಾನಗರ’ವನ್ನಾಗಿಯೇ ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


