ಕಾಂಗ್ರೆಸ್ ನಾಯಕರು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಉಚಿತ ಎಂದು ಹೇಳಿದ್ದರು. ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಅಕ್ಕಿ ವಿತರಣೆಯಲ್ಲಿ ಬಹಳ ಗೊಂದಲಗಳು ಸೃಷ್ಟಿಯಾಗಿವೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟೆಂಡರ್ ಮೂಲಕ ಅಕ್ಕಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ (ಎನ್ ಸಿಸಿಎಫ್), ನ್ಯಾಷನಲ್ ಅಗ್ರಿಕಲ್ಬರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (ನಾಫೆಡ್) ಹಾಗೂ ಕೇಂದ್ರೀಯ ಭಂಡಾರ, ಈ ಮೂರು ಸಂಸ್ಥೆಗಳು ಭಾರತ ಸರ್ಕಾರಕ್ಕೆ ಸೇರಿದೆ. ಈ ಮೂರು ಸಂಸ್ಥೆಗಳಿಂದ ಅಕ್ಕಿ ಪಡೆಯುವುದಕ್ಕೆ ದರಪಟ್ಟಿ ಕರೆಯಲು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಸಿಎಂ ತಿಳಿಸಿದರು. ಇಂದು ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಭಾರತೀಯ ಆಹಾರ ಮಂಡಳಿ (ಎಫ್‌ಸಿಐ) ನಿಂದ 34 ರೂ. ಅಕ್ಕಿ, 2. 60 ರೂ. ಸಾಗಾಣಿಕೆ ವೆಚ್ಚ ಸೇರಿ ಒಂದು ಕೆ.ಜಿ. ಅಕ್ಕಿಗೆ ಒಟ್ಟು 36. 40 ರೂ. ವೆಚ್ಚ ತಗಲುತ್ತದೆ. ಈ ಮೂರು ಸಂಸ್ಥೆಗಳು ನಮೂದಿಸುವ ದರ, ಸರಬರಾಜು ಮಾಡುವ ಪ್ರಮಾಣಗಳ ವಿವರ ಪಡೆಯಲಾಗುವುದು. ಟೆಂಡರ್ ಮೂಲಕ ಅಕ್ಕಿ ಪಡೆಯಲೂ ಕ್ರಮ ಕೈಗೊಳ್ಳಲಾಗುವುದು.
ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸಲು ಒಂದು ತಿಂಗಳಿಗೆ 840 ಕೋಟಿ ರೂ. ವೆಚ್ಚ ತಗುಲಲಿದೆ. ವರ್ಷಕ್ಕೆ 10, 092 ಕೋಟಿ ವೆಚ್ಚವಾಗಲಿದೆ. ಸರ್ಕಾರ ಈ ವೆಚ್ಚವನ್ನು ಭರಿಸಿ ಅಕ್ಕಿಯನ್ನು ವಿತರಿಸಲು ಸಿದ್ಧವಿದೆ. ಅಕ್ಕಿಯ ದಾಸ್ತಾನು ಲಭ್ಯವಿದ್ದರೂ ಕೇಂದ್ರ ಸರ್ಕಾರದವರು ಅಕ್ಕಿ ನೀಡಲು ಒಪ್ಪುತ್ತಿಲ್ಲ. ರಾಜ್ಯ ಬಿಜೆಪಿ ಪಕ್ಷದವರು ರಾಜ್ಯದ ಬಡವರಿಗೆ ಅನುಕೂಲವಾಗಲು ಅಕ್ಕಿಯನ್ನು ವಿತರಿಸುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಬಹುದಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ರಾಗಿ, ಜೋಳವನ್ನು 6 ತಿಂಗಳವರೆಗೆ ತಲಾ 2 ಕೆಜಿ ಕೊಡುವಷ್ಟು ಮಾತ್ರ ದಾಸ್ತಾನು ಲಭ್ಯವಿದೆ. ಹಳೇ ಮೈಸೂರು ಭಾಗದ ಜನರಿಗೆ 2 ಕೆಜಿ ರಾಗಿ ಹಾಗೂ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗದ ಜನರಿಗೆ 2 ಕೆಜಿ ಜೋಳ ನೀಡಬಹುದು. ಇನ್ನುಳಿದ 3 ಕೆಜಿ ಅಕ್ಕಿಯನ್ನು ರಾಜ್ಯದ ಜನರಿಗೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


