ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ 225 ಹೃದ್ರೋಗಿಗಳಿಗೆ ಉಚಿತವಾಗಿ ಸ್ಟೆಂಟ್ ಅಳವಡಿಸಲಾಗಿದೆ.ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್ ಹಾಗೂಅಮೆರಿಕದ ಮೆಡ್‌ಟ್ರಾನಿಕ್ಸ್, ವಿಸ್ಕಿನ್‌ಸನ್ ಸಂಸ್ಥೆಗಳ ಸಹಯೋಗದಲ್ಲಿಈ ಕಾರ್ಯಾಗಾರವು ಬೆಂಗಳೂರು, ಮೈಸೂರು ಹಾಗೂ ಕಲಬುರಗಿಯಲ್ಲಿ ನಡೆದಿದೆ. ರೈತರು, ದಿನಗೂಲಿ ನೌಕರರು, ಆಟೋ ರಿಕ್ಷಾ ಚಾಲಕರು, ಬೀದಿ ಬದಿ ಕಾರ್ಮಿಕರು ಹಾಗೂ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ರಾಜ್ಯದ ಹೃದ್ರೋಗಿಗಳ ಜತೆಗೆ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣದ ರೋಗಿಗಳೂ ಕಾರ್ಯಾಗಾರದಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ಈ ಅಸಾಧಾರಣ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ 17 ಕ್ಯಾತ್ ಲ್ಯಾಬ್ ನೆರವಾಗಿವೆ. 120 ನುರಿತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಶ್ರಮಿಸಿದ್ದಾರೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ತಿಳಿಸಿದರು.
ಹೃದಯಾಘಾತಕ್ಕೆ ಸಂಬಂಧಿಸಿದ ಕಾಯಿಲೆಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರ ಆತಂಕಕ್ಕೆ ಕಾರಣವಾಗಿವೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಿದವರಲ್ಲಿ 31 ವರ್ಷದ ದಿನಗೂಲಿ ಕೆಲಸಗಾರ ಅತ್ಯಂತ ಕಿರಿಯ ವ್ಯಕ್ತಿಯಾದರೆ, 85 ವರ್ಷದವರು ಅತ್ಯಂತ ಹಿರಿಯರಾಗಿದ್ದಾರೆ. ಶೇ 25 ರಷ್ಟು ರೋಗಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ’ ಎಂದು ಹೇಳಿದರು.
ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾದ ರೋಗಿಗಳೊಡನೆ ಸಮಾಲೋಚನೆ ನಡೆಸಿದ ಡಾ. ಸಿ. ಎನ್. ಮಂಜುನಾಥ್, ‘ರಕ್ತ ತೆಳುಗೊಳಿಸುವ ಮಾತ್ರೆಗಳನ್ನು ನಿಲ್ಲಿಸಬಾರದು. ಒಂದು ವೇಳೆ ನಿಲ್ಲಿಸಿದಲ್ಲಿ ಮತ್ತೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ರಕ್ತದೊತ್ತಡ ಮತ್ತು ಸಕ್ಕರೆ ಅಂಶದಲ್ಲಿ ನಿಯಂತ್ರಣ ಸಾಧಿಸಬೇಕು. ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ, ದಿನನಿತ್ಯ ವ್ಯಾಯಾಮ ಮಾಡಬೇಕು’ ಎಂದು ಸೂಚಿಸಿದರು.
ಪುರುಷರೇ ಅಧಿಕ : ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ ಪಾಲ್ಗೊಂಡವರಲ್ಲಿ ಶೇ 78 ರಷ್ಟು ರೋಗಿಗಳು ಪುರುಷರಾಗಿದ್ದಾರೆ. ಚಿಕಿತ್ಸೆ ಪಡೆದ ರೋಗಿಗಳಲ್ಲಿ ಶೇ 50ರಷ್ಟು ಮಂದಿಯಲ್ಲಿ ಮಧುಮೇಹ ಶೇ 53ರಷ್ಟು ರೋಗಿಗಳಲ್ಲಿ ಅಧಿಕ ರಕ್ತದೊತ್ತಡ ಪತ್ತೆಯಾಗಿದೆ. ಶೇ 36ರಷ್ಟು ರೋಗಿಗಳು ಧೂಮಪಾನಿಗಳಾಗಿದ್ದರು’ ಎಂದು ಡಾ. ಸಿ. ಎನ್. ಮಂಜುನಾಥ್ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


