ಬಾಗಲಕೋಟೆ: ಸಂಗೀತ ಮತ್ತು ಯೋಗದಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ಏಕಾಗ್ರತೆಯನ್ನು ಬೆಳಸಿಕೊಳ್ಳಲು ಸಾಧ್ಯ ಎಂದು ಡಾ. ಪುಟ್ಟರಾಜ ಗವಾಯಿ ಸ್ಕೂಲ್ ಆಫ್ ಮ್ಯೂಸಿಕ್ ಸಂಯೋಜಕರಾದ ಪಂ.ಸಿದ್ದರಾಮಯ್ಯ ಮಠಪತಿ ಹೇಳಿದರು.
ಬಿವ್ಹಿವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಡಾ.ಪುಟ್ಟರಾಜ ಗವಾಯಿ ಸ್ಕೂಲ್ ಆಫ್ ಮ್ಯೂಜಿಕ್, ಐಕ್ಯೂಎಸಿ ಮತ್ತು ಸಂಸ್ಕೃತಿಕ ವಿಭಾಗ ಹಾಗೂ ಸಂಗೀತ ವಿಭಾಗದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಅಂತರಾಷ್ಟ್ರೀಯ ಸಂಗೀತ ಮತ್ತು ಯೋಗ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಕರ್ನಾಟಕದಲ್ಲಿಯೇ ಮೊದಲ ಭಾರಿಗೆ ಅಂತರಾಷ್ಟ್ರೀಯ ಸಂಗೀತ ದಿನಾಚರಣೆ ಮಾಡಿದ ಹೆಮ್ಮೆ ಬಾಗಲಕೋಟೆಯ ಜಿಲ್ಲಾ ಸಂಗೀತಗಾರರಿಗೆ ಸಲ್ಲುತ್ತದೆ. ಸಂಗೀತ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿದ್ದು ವಿದ್ಯಾರ್ಥಿಗಳು ಸಂಗೀತ ಕ್ಷೇತ್ರದತ್ತ ಒಲವು ತೋರಬೇಕು. ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಸಂಗೀತ ವಿಭಾಗಗಳು ಮುಚ್ಚುತ್ತಿರುವುದು ಖೇದಕರ ಸಂಗತಿ ಎಂದರು.
ಸಂಗೀತವು ಸರ್ವವ್ಯಾಪಿಯಾಗಿದ್ದು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಂಗೀತಾಸಕ್ತರು ಕಾರ್ಯತಪ್ತರಾಗಬೇಕು. ಪದವಿ ಮತ್ತು ಸ್ನಾತಕ ಮಟ್ಟದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸಂಗೀತ ವಿಭಾಗಗಳನ್ನು ಪ್ರಾರಂಭಿಸಬೇಕು. ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು ಸಂಗೀತಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡಲು ಪ್ರಯತ್ನಿಸಿದಾಗ ಮಾತ್ರ ಅರ್ಥಗರ್ಭಿತ ದಿನಾಚರಣೆಯಾಗಲು ಸಾಧ್ಯ ಎಂದರು.
ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಅವರು ಅಧ್ಯಕ್ಷೀಯವಾಗಿ ಮಾತನಾಡಿ ಯೋಗ ಮತ್ತು ಸಂಗೀತಾಭ್ಯಾಸಗಳು ಸೃಜನಶೀಲತೆಯ ಮೂಲವಾಗಿದ್ದು ಇವುಗಳೆರಡೂ ಶ್ವಾಸ ಕ್ರಿಯೆಯಿಂದ ಹುಟ್ಟುವ ಒಂದೇ ಆಯಾಮದ ಎರಡು ಮುಖಗಳಾಗಿವೆ. ಯೋಗ ಮತ್ತು ಸಂಗೀತದಿಂದ ಭಾವನಾತ್ಮಕ ನಿಯಂತ್ರಣ, ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ವೃದ್ಧಿ ಮಾಡಿಕೊಳ್ಳಲು ಸಾಧ್ಯ ಎಂದರು.
ಯೋಗಿ, ಋಷಿಮುನಿಗಳು ಧ್ಯಾನದ ಮೂಲವಾಗಿ ಸಂಗೀತ ಮತ್ತು ಯೋಗವನ್ನು ಅಭ್ಯಾಸ ಮಾಡುತ್ತಾ ಬಂದಿದ್ದು, ಇದೀಗ ನಾವು ಎರಡು ವಿಧಗಳಾಗಿ ವಿಂಗಡಿಸಿ ಅಭ್ಯಾಸದಲ್ಲಿ ತೊಡಗಿದ್ದೇವೆ. ಇವುಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಯಶಸ್ಸು ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಿ ಮಠ ಪ್ರಾಸ್ಥಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕರಾದ ಅಪ್ಪು ರಾಠೋಡ, ಪ್ರಾದ್ಯಾಪಕರುಗಳಾದ ಆರ್.ಎಮ್ ಬೆನ್ನೂರ, ಸಿ.ಎಮ್ ಮಠದ ಸೇರಿದಂತೆ ವಿವಿಧ ವಿಭಾಗದ ಪ್ರಾದ್ಯಾಪಕರುಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


