ಹೊಸ ಪೀಳಿಗೆಯವರಿಗೆ ಸಾಧಕರ ಪರಿಚಯ ಮಾಡಲು ಕನ್ನಡ ಸಾಹಿತ್ಯ ಪರಿಷತ್‌ನಿಂದ ಕನ್ನಡದ ಹೆಸರು ಮತ್ತು ಸಹಿ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಡಾ. ಮಹೇಶ ಜೋಶಿ ಅವರು, ಮಹಾತ್ಮ ಗಾಂಧಿ ರಸ್ತೆ ಈಗ ಎಂ. ಜಿ. ರಸ್ತೆಯಾಗಿದೆ, ಕೃಷ್ಣ ರಾಜ ಒಡೆಯರ ಹೆಸರಿನಲ್ಲಿ ಇರುವ ರಸ್ತೆ ಕೆ. ಆರ್. ರಸ್ತೆಯಾಗಿದೆ. ನರಸಿಂಹ ರಾಜ ಒಡೆಯರ್ ಅವರ ಹೆಸರಿನಲ್ಲಿ ರೂಪಿತವಾದ ಬಡಾವಣೆ ಎನ್. ಆರ್. ಕಾಲೋನಿಯಾಗಿದೆ. ಹೀಗೆ ಹತ್ತಾರು ಉದಾಹರಣೆಗಳನ್ನು ನೀಡಬಹುದು. ಕನ್ನಡ ಬರಹಗಾರರಲ್ಲಿ ಡಿ. ವಿ. ಗುಂಡಪ್ಪ ಅವರ ಹೆಸರನ್ನು ಡಿ. ವಿ. ಜಿ ಎಂದು ಬರೆಯುವ ಪದ್ಧತಿ ಜನಜನಿತವಾಗಿದ್ದು, ಅವರ ಮೂಲ ಹೆಸರೇ ಮರೆಯಾಗುವ ಅಪಾಯವಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಎಚ್. ಎಸ್. ವಿ (ಎಚ್. ಎಸ್. ವೆಂಕಟೇಶ ಮೂರ್ತಿ), ಬಿ. ಆರ್. ಎಲ್ (ಬಿ. ಆರ್. ಲಕ್ಷ್ಮಣ ರಾವ್) ಪಿ. ಟಿ. ಎನ್, (ಪು. ತಿ. ನರಸಿಂಹಾಚಾರ್) ಕೆ. ಎಸ್. ಎನ್ (ಕೆ. ಎಸ್. ನರಸಿಂಹ ಸ್ವಾಮಿ) ಇಂತಹ ಪ್ರಯೋಗಗಳು ಸಾಮಾಜಿಕ ಜಾಲತಾಣಗಳು ಬೆಳೆಯುತ್ತಾ ಹೋದಷ್ಟು ಹೆಚ್ಚಾಗುತ್ತಿದೆ. ಸೌಂತ್ ಎಂಡ್ ಸರ್ಕಲ್‌ಗೆ ತೀನಂಶ್ರೀ ವೃತ್ತ ಎಂದು ಬೆಂಗಳೂರು ಮಹಾನಗರ ಪಾಲಿಕೆ ಅಧಿಕೃತ ನಾಮಕರಣ ಮಾಡಿದ್ದರೂ ಅದು ಜನ ಜನಿತವಾಗಿಲ್ಲ. ಟ್ಯಾಂಕ್ ಬಂಡ್ ರಸ್ತೆಗೆ ಆರ್. ನಾಗೇಂದ್ರ ರಾಯರ ಹೆಸರು ಇಟ್ಟಿದ್ದರೂ ಅದು ಆಚರಣೆಗೆ ಬಂದಿಲ್ಲ. ಇಂತಹ ಹಲವು ದೋಷಗಳನ್ನು ಪಟ್ಟಿ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಅಭಿಯಾನ ಆರಂಭಿಸಲು ಕನ್ನಡ ಸಾಹಿತ್ಯ ಪರಿಷತ್ ಅಲೋಚಿಸಿದೆ ಎಂದು ಡಾ. ಮಹೇಶ ಜೋಶಿ ಹೇಳಿದ್ದಾರೆ.
ಇದಲ್ಲದೆ ಈಗ ಹೆಸರು ಇಟ್ಟಿರುವ ಸಾಧಕರ ಕುರಿತು ಜನ ಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸಿ ಅರಿವನ್ನು ಹೆಚ್ಚಿಸುವ ಉದ್ದೇಶವೂ ಕನ್ನಡ ಸಾಹಿತ್ಯ ಪರಿಷತ್‌ಗೆ ಇದೆ. ಉದಾಹರಣೆಗೆ ಬ್ಯೂಗಲ್ ರಾಕ್ ಪಾರ್ಕ್ ದ್ವಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ ಏಳಿಗೆಗೆ ಶ್ರಮಿಸಿದ ಬೆಳ್ಳಾವೆ ವೆಂಕಟನಾರಾಯಣಪ್ಪ ಅವರ ಹೆಸರನ್ನು ಇಡಲಾಗಿದೆ. ಆದರೆ, ಅವರ ಕುರಿತ ವಿವರಗಳು ಅಲ್ಲಿ ಲಭ್ಯವಿಲ್ಲ. ಈ ವಿವರಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಅಲ್ಲಿ ಅಳವಡಿಸುವ ಉದ್ದೇಶ ಕನ್ನಡ ಸಾಹಿತ್ಯ ಪರಿಷತ್‌ಗೆ ಇದೆ ಎಂದು ಅಭಿಯಾನದ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದಾರೆ. ಕನ್ನಡದಲ್ಲಿ ಸಹಿ ಮಾಡುವ ಅಭಿಯಾನವನ್ನೂ ಕೂಡ ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಲಿದೆ.
ಸಹಿ ಎನ್ನುವುದು ವ್ಯಕ್ತಿಯ ವ್ಯಕ್ತಿತ್ವದ ಹೆಗ್ಗುರುತು ಇದ್ದಂತೆ. ಇಲ್ಲಿ ಕನ್ನಡ ಬಳಕೆಯಾದರೆ ಭಾಷೆಯ ಭಾವನಾತ್ಮಕ ಅಯಾಮದ ಜತೆಗಿನ ವ್ಯಕ್ತಿಯ ಬಾಂಧವ್ಯವೂ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿಯೇ ಸಹಿ ಮಾಡುವಂತೆ ಕನ್ನಡಿಗರೆಲ್ಲರೂ ಜಾಗೃತಿ ಉಂಟು ಮಾಡುವ ಇಂತಹ ಕನ್ನಡದ ಸಹಿಯನ್ನು ಎಲ್ಲಾ ಅಧಿಕೃತ ವ್ಯವಹಾರಗಳಲ್ಲಿಯೂ ಮಾನ್ಯ ಮಾಡುವಂತೆ ಮಾಡುವ ಅಭಿಯಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತೊಡಗಲಿದೆ ಎಂದು ಹೇಳಿದ್ದಾರೆ.
ಕನ್ನಡವನ್ನು ಎಲ್ಲಾ ಹಂತದಲ್ಲಿಯೂ ಸ್ಥಾಪಿಸುವ ಇನ್ನಷ್ಟು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದ ಡಾ. ಮಹೇಶ ಜೋಶಿ ಅವರು, ಅನುಷ್ಠಾನದಲ್ಲಿ ಎಲ್ಲಾ ಕನ್ನಡಿಗರ ಸಹಕಾರ ಅಗತ್ಯವಿದೆ. ಕನ್ನಡ ತಾಯಿ ಭುವನೇಶ್ವರಿಯ ನೆಲೆವೀಡಾದ ಸಿದ್ದಾಪುರಿಂದ ಈ ಅಭಿಯಾನ ಆರಂಭವಾಗಲಿದ್ದು, ಶೀಘ್ರದಲ್ಲಿಯೇ ದಿನಾಂಕವನ್ನು ನಿಗದಿ ಪಡಿಸುವುದಾಗಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


