ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾದ ಜಲ ಜೀವನ್ ಮಿಷನ್ ಗೆ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಕರ್ನಾಟಕ ರಾಜ್ಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
‘ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಅನುಷ್ಠಾನ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಾದ್ಯಂತ ನಡೆಯುತ್ತಿದೆ. ಸರ್ಕಾರಗಳ ಹಣದೊಂದಿಗೆ ಜನರಿಂದಲೂ ಪ್ರತಿ ಗ್ರಾಮದಲ್ಲಿ ಸಮುದಾಯವಂತಿಗೆಯ ಮೂಲಕ ಹಣ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ‘ಹರ್ ಘರ್ ಜಲ್’ ಎಂದು ಹೇಳುತ್ತಾ ಪ್ರತಿಯೊಂದು ನಳಕ್ಕೂ ಮೀಟರ್ ಅಳವಡಿಸಲಾಗುತ್ತದೆ. ಇದರಿಂದ ನೀರಿಗೆ ದುಬಾರಿ ಬಿಲ್ ತೆರಬೇಕಾಗುತ್ತದೆ. ಕನಿಷ್ಠ ಮೂಲಭೂತ ಅವಶ್ಯಕತೆಯಾದ ನೀರಿಗೂ ಮೀಟರ್ ಅಳವಡಿಸಿ, ಹಣ ದೋಚುವ ಹುನ್ನಾರವನ್ನು ಸರ್ಕಾರ ಮರೆಮಾಚುತ್ತಿವೆ’ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ಉಮಾ ಆರೋಪಿಸಿದ್ದಾರೆ.
ಈಗಾಗಲೇ ಖಾಸಗೀಕರಣ ನೀತಿಗಳಿಂದ ತತ್ತರಿಸುವ ಜನತೆ, ಶಿಕ್ಷಣ, ಆರೋಗ್ಯ, ಅಡುಗೆ ಅನಿಲ ಹಾಗೂ ಇತರ ಕನಿಷ್ಠ ಅವಶ್ಯಕತೆಗಳಿಗೆ ದುಬಾರಿ ಶುಲ್ಕ ಪಾವತಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಣ ವಸೂಲಿಗೆ ದಾರಿ ಮಾಡಿಕೊಡುವ ಜಲ ಜೀವನ್ ಮಿಷನ್ ಯೋಜನೆಯನ್ನು ಕೈಬಿಟ್ಟು, ಹಿಂದಿನಂತೆಯೇ ಜನರಿಗೆ ನೀರು ಸರಬರಾಜು ಮಾಡುವ ನೀತಿಯನ್ನು ಮುಂದುವರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


