ರಾಜ್ಯದಲ್ಲಿ ‘ಶಕ್ತಿ’ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ
ಒತ್ತಾಯಿಸಿದೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದು ಶ್ಲಾಘನೀಯ. ಜತೆಗೆ, ಪ್ರಯಾಣಿಕರು ಸಾರಿಗೆ ಸಿಬ್ಬಂದಿ ಮೇಲೆ ನಡೆಸುತ್ತಿರುವ ಹಲ್ಲೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಬೇಕು’ ಎಂದು ಒತ್ತಾಯಿಸಿದೆ.
ಈಗಾಗಲೇ ಕ್ಷುಲಕ ಕಾರಣಗಳಿಗೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ಮೇಲೆ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ, ಕೂಡಲೇ ಬಂಧಿಸಬೇಕು. ಹಲ್ಲೆ ಮಾಡಿದ ವ್ಯಕ್ತಿಗಳ ಭಾವಚಿತ್ರವನ್ನು ಮಾಧ್ಯಮಗಳಲ್ಲಿ ಪ್ರಕಟಿಸಬೇಕು. ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುವ ಸಾರಿಗೆ ಸಿಬ್ಬಂದಿ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಬೇಕು’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೂ ಆದಾಯ ಹೆಚ್ಚುತ್ತಿದೆ. ಆದ್ದರಿಂದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಗಳ ಸಂಖ್ಯೆ ಹೆಚ್ಚಿಸಬೇಕು ಹಾಗೂ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


