ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಗಳಿಂದ ವಾಸಿ ಮಾಡಲಾಗದ ನೋವುಗಳ ಶಮನಕ್ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ‘ನೋವು ನಿರ್ವಹಣಾ ಕ್ಲಿನಿಕ್’ ಪ್ರಾರಂಭಿಸಲಾಗುತ್ತಿದೆ. ಸರ್ಕಾರಿ ವ್ಯವಸ್ಥೆಯಡಿ ನಗರದಲ್ಲಿ ಪ್ರಾರಂಭವಾಗುತ್ತಿರುವ ಪ್ರಥಮ ಕ್ಲಿನಿಕ್ ಇದಾಗಲಿದೆ.
ಈ ಕ್ಲಿನಿಕ್ ನಲ್ಲಿ ಸೇವೆ ನೀಡುವ ಸಂಬಂಧ ಈಗಾಗಲೇ ಅರಿವಳಿಕೆ ತಜ್ಞರು ತರಬೇತಿ ಪಡೆದಿದ್ದಾರೆ. ಕ್ಯಾನ್ಸರ್, ಸಂಧಿವಾತ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರ ಚಿಕಿತ್ಸೆಯ ನಂತರವೂ ನೋವು ಕಡಿಮೆಯಾಗದಿದ್ದಲ್ಲಿ ಈ ಕ್ಲಿನಿಕ್ ಗೆ ಶಿಫಾರಸು ಮಾಡಲಾಗುತ್ತದೆ. ಎಲ್ಲ ವಯೋಮಾನದವರಿಗೂ ಈ ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನೋವು ಶಮನ ಮಾಡಲು ಇದು ಅಂತಿಮ ಆಯ್ಕೆಯಾಗಿದ್ದು, ಈಗಾಗಲೇ ಆಸ್ಪತ್ರೆಯ ಮಾಸ್ಟರ್ ಪ್ಲಾನ್ ಬಿಲ್ಡಿಂಗ್‌ನಲ್ಲಿ ಕೇಂದ್ರವನ್ನು ರೂಪಿಸಲಾಗಿದೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿ ವಿಕ್ಟೋರಿಯಾ, ವಾಣಿವಿಲಾಸ, ಮಿಂಟೊ, ಟ್ರಾಮಾ ಕೇರ್ ಕೇಂದ್ರ, ನೆಫ್ರ-ಯೂರಾಲಜಿ ಸಂಸ್ಥೆ, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟೋಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಚಿಕಿತ್ಸೆ ಪಡೆಯಲು ಪ್ರತಿನಿತ್ಯ 2 ಸಾವಿರಕ್ಕೂ ಅಧಿಕ ರೋಗಿಗಳು ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬರುತ್ತಾರೆ. ಕ್ಯಾನ್ಸರ್ ಸೇರಿ ವಿವಿಧ ಗಂಭೀರ ಅನಾರೋಗ್ಯ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಬಳಿಕವೂ ನೋವು ನಿವಾರಣೆಯಾಗದ ಕಾರಣ ಹೆಚ್ಚಿನ ಚಿಕಿತ್ಸೆಗೆ ಕೆಲವರು ಮರಳಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಅಂತಹವರಿಗೆ ಈ ಕ್ಲಿನಿಕ್ ನೆರವಾಗಲಿದೆ.
ಅಂತಿಮ ಚಿಕಿತ್ಸೆ: ಮೂಳೆ, ಮಾಂಸಖಂಡ, ನರ ಸೇರಿ ದೇಹದ ಯಾವ ಅಂಗಕ್ಕೆ ಹಾನಿಯಾಗಿ, ನೋವು ಕಾಣಿಸಿಕೊಂಡಿದೆ ಎನ್ನುವುದನ್ನು ವೈದ್ಯರು ಅಧ್ಯಯನ ಮಾಡಿ ಚಿಕಿತ್ಸೆ ನೀಡಲಿದ್ದಾರೆ. ಮಾತ್ರೆ, ಚುಚ್ಚುಮದ್ದಿನ ಜತೆಗೆ ಸಂಧಿವಾತ ಹಾಗೂ ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಫಿಜಿಯೋಥೆರಪಿ ಚಿಕಿತ್ಸೆ ಸಹ ನೀಡಲಾಗುತ್ತದೆ. ‘ರೇಡಿಯೋ ಫ್ರೀಕ್ವೆನ್ಸಿ ಅಬ್ರೇಶನ್ ಯಂತ್ರವನ್ನೂ ಕೇಂದ್ರದಲ್ಲಿ ಅಳವಡಿಸಲಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮನುಷ್ಯನ ದೇಹದಲ್ಲಿ ‘ಮೋಟಾರ್ ನರ’ ಹಾಗೂ ‘ಸಂವೇದನಾ ನರ ಇರುತ್ತದೆ. ಇವು ಮನುಷ್ಯನ ಅಂಗಾಂಗಗಳ ಚಲನೆಗೆ ಪೂರಕವಾಗಿ ಇರುತ್ತವೆ. ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ನೋವಿರುವ ನರದ ಭಾಗವನ್ನು ದಹಿಸಲಾಗುತ್ತದೆ. ಇದರಿಂದ ರೋಗಿಯು 10 ತಿಂಗಳಿಂದ ವರ್ಷದವರೆಗೆ ನೋವು ರಹಿತವಾಗಿರಲು ಸಹಕಾರಿ. ಬಳಿಕ ಮತ್ತೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ 7 20 ಸಾವಿರದಿಂದ ಲಕ್ಷ ರೂಪಾಯಿವರೆಗೂ ಈ ಚಿಕಿತ್ಸೆಗೆ ಹಣ ಪಾವತಿಸಬೇಕಾಗುತ್ತದೆ. ಇದನ್ನು ಬಿಪಿಎಲ್ ಕುಟುಂಬದವರಿಗೆ ಉಚಿತವಾಗಿ, ಉಳಿದವರಿಗೆ ಕೈಗೆಟಕುವ ದರದಲ್ಲಿ ಒದಗಿಸಲಾಗುತ್ತದೆ’ ಎಂದು ವ್ಯದ್ಯರು ಹೇಳಿದರು.
ದಿನವೊಂದರಲ್ಲಿ ಭೇಟಿ ನೀಡುವ ಹೊರರೋಗಿಗಳ ಸರಾಸರಿ ಸಂಖ್ಯೆ ನೋವು ನಿರ್ವಹಣಾ ಕ್ಲಿನಿಕ್‌ಗೆ ಶೀಘ್ರದಲ್ಲಿಯೇ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಕಾಯಿಲೆಗೆ ಚಿಕಿತ್ಸೆಯ ಬಳಿಕವೂ ನೋವು ನಿವಾರಣೆ ಆಗದಿದ್ದರೆ ಇಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ. ಡಾ. ರಮೇಶ್ ಕೃಷ್ಣ ಕೆ. ಬಿಎಂಸಿಆರ್‌ಐ ಡೀನ್
‘ರೋಗಿಗಳ ಜೀವನಮಟ್ಟ ಸುಧಾರಣೆ’:
‘ನೋವು ನಿರ್ವಹಣಾ ಕ್ಲಿನಿಕ್ ರೋಗಿಗಳ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ. ಇದು ತಾತ್ಕಾಲಿಕವಾಗಿ ನೋವನ್ನು ಶಮನ ಮಾಡಲಿದೆ. ಅಪಘಾತ ಸೇರಿ ವಿವಿಧ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವು ಚಿಕಿತ್ಸೆಯ ಬಳಿಕವೂ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ದೈನಂದಿನ
ಚಟುವಟಿಕೆ ಕಷ್ಟವಾಗುತ್ತದೆ. ಅಂತಹವರಿಗೆ ಈ ಚಿಕಿತ್ಸೆಯು ಹೊಸ ಭರವಸೆ ನೀಡಲಿದೆ. ಸಾಮಾನ್ಯವಾಗಿ 12 ವಾರಗಳು ಇರುವ ನೋವನ್ನು ದೀರ್ಘ ಕಾಲದ ನೋವು ಎಂದು ಕರೆಯಲಾಗುತ್ತದೆ’ ಎಂದು ವಿಕ್ಟೋರಿಯಾ ವೈದ್ಯರು ತಿಳಿಸಿದರು. ‘ವೈದ್ಯರ ಶಿಫಾರಸು ಇಲ್ಲದೆಯೇ ನೋವು ನಿವಾರಕ ಚಿಕಿತ್ಸೆ ಹಾಗೂ ಔಷಧವನ್ನು ನೀಡುವುದಿಲ್ಲ. ನೋವು ನಿವಾರಕ ಔಷಧದ ಅತಿಯಾದ ಬಳಕೆ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


