ಸಹೋದರನಂತಿದ್ದ ಧೃವನಾರಾಯಣ ಅವರ ಅಗಲಿಕೆ ನನ್ನ ಮನಸ್ಸಿಗೆ ಬಹಳ ನೋವು ತಂದಿದೆ. ನನಗೆ ರಾಜಕಾರಣದಲ್ಲಿ ಧೃವನಾರಾಯಣ್ ಸಹೋದರನಾಗಿದ್ದ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭಾವುಕರಾದರು.
ವಿಧಾನಮಂಡಲ ಅಧಿವೇಶನದ ಮೊದಲ ದಿನದ ಕಲಾಪದಲ್ಲಿ, ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು ಈ ವೇಳೆ ಮಾತನಾಡಿದ ಅವರು, ಧೃವನಾರಾಯಣ್ ಅವರು ನನ್ನ ಜತೆ ಕಾರ್ಯಾಧ್ಯಕ್ಷರಾಗಿದ್ದರು. ಅವರಿಗೆ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲಾ ಜವಾಬ್ದಾರಿ ವಹಿಸಿದ್ದೆ. ಈ ಎಲ್ಲಾ ಕಡೆಗಳಲ್ಲಿ ಅವರು ಶುದ್ಧ ರಾಜಕಾರಣ ಮಾಡಿದ್ದಾರೆ.
ಅವರಿಗೆ ವಹಿಸಿದ್ದ ಪ್ರದೇಶದಲ್ಲಿ ಸುಮಾರು 75% ರಷ್ಟು ಸದಸ್ಯರು ಆಯ್ಕೆಯಾಗಿ ಬಂದಿದ್ದಾರೆ ಎಂದರು.
ಇಂದು ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯುತ್ತಿದ್ದು, ನನ್ನ ನಂತರ ಈ ಸ್ಥಾನದಲ್ಲಿ ಧೃವನಾರಾಯಣ ಅವರನ್ನು ಕೂರಿಸಬೇಕು ಎಂಬ ಆಲೋಚನೆ ನನ್ನ ತಲೆಯಲ್ಲಿತ್ತು. ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್ ಅವರು ಸಚಿವ ಸಂಪುಟದ ಸದಸ್ಯರಾಗಿ ಕೂತಿದ್ದಾರೆ.
ಧೃವನಾರಾಯಣ ಅವರು ಬದುಕಿದ್ದರೆ, ಅವರು ಕೂಡ ಈ ಸದನದಲ್ಲಿ ಸಚಿವ ಸ್ಥಾನದಲ್ಲಿ ಕೂರುವುದನ್ನು ಯಾರಿಂದಲೂ ತಪ್ಪಿಸಲು ಆಗುತ್ತಿರಲಿಲ್ಲ ಎಂದು ಶಿವಕುಮಾರ್ ಹೇಳಿದರು.ಪಕ್ಷದ ಸಂಘಟನೆಯಲ್ಲಿ ಅವರಿಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ನಮ್ಮ ಪಕ್ಷದ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಮಾಡಿದಾಗ, ಅವರು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


