ಬೈಲಹೊಂಗಲ: ಅತಿವೃಷ್ಟ, ಅನಾವೃಷ್ಟಿಯ ಜೋತೆಗೆ ಕೋವಿಡ್ ಹಾವಳಿಯಿಂದ ಕಳೆದ ಹಲವಾರು ವರ್ಷಗಳಿಂದ ರೈತರಿಗೆ ತೊಂದರೆಯಾಗಿದ್ದು ಈ ಭಾರಿಯಾದರು ಉತ್ತಮ ಮಳೆಯಿಂದ ಬೆಳೆ ತಗೆಯುವ ಉದ್ದೇಶದಿಂದ ಸಾಲ ಮಾಡಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ರೈತರು ಖರೀದಿಸಿ ಮನೆಯಲ್ಲಿ ಸಂಗ್ರಹಿಸಿದ್ದಾರೆ.
ಮಂಗಾರು ಮಳೆ ಸಂಪೂರ್ಣವಾಗಿ ವಿಫಲ ಕಂಡಿದೆ. ಇದರಿಂದ ಜನ ಜಾನುವಾರು ಹಾಗೂ ರೈತ ಸಮುದಾಯ ಸಂಕಷ್ಟದಲ್ಲಿದ್ದು ತಕ್ಷಣ ರಾಜ್ಯ ಸರ್ಕಾರ ಬರಗಾಲ ಜಿಲ್ಲೆಯನ್ನಾಗಿ ಘೋಷಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಆಗ್ರಹಿಸಿ ಉಪವಿಭಾಗಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರ ಪರವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘದಿಂದ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಹಾಗೂ ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಬೈಲಹೊಂಗಲ ಮತ್ತು ಸವದತ್ತಿ ತಾಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯನ್ನು ಬರಗಾಲ ಜಿಲ್ಲೆಯನ್ನಾಗಿ ಘೋಷಿಸಬೇಕು. ರೈತರ ಜಮೀನುಗಳ ಆಧಾರದ ಮೇಲೆ ಪ್ರತಿ ಎಕರೆಗೆ 50ಸಾವಿರ ರೂಪಾಯಿ ಪರಿಹಾರ ನೀಡಬೇಕು. ಜಾನುವಾರಗಳ ಪೋಷಣೆಗೆ ಪ್ರತಿ ಗ್ರಾಮ ಪಂಚಾಯತಿಗೊಂದು ಮೇವ-ಬ್ಯಾಂಕ್ ತೆರೆಯಬೇಕು. ಕುಡಿಯುವ ನೀರಿನ ಕೊರತೆಯಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕೊಳವೆ ಬಾವಿ, ತೆರೆದ ಬಾವಿಗಳ ಮೇಲೆ ನೀರಾವರಿ ಮಾಡುತ್ತಿರುವ ರೈತರ ಪಂಪಸೆಟ್ ಗಳಿಗೆ ಕನಿಷ್ಟ 10ತಾಸು ಗುಣಮಟ್ಟ ತಡೆ ರಹಿತ ವಿದ್ಯತ್ ಒದಗಿಸಬೇಕು. ರೈತರಿಗೆ ಸ್ಪಿಂಕ್ಲರ್ ಸೆಟ್ ವಿತರಣೆಗೆ ಆಧ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ಕೊಡುತ್ತಿರುವ 4ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಯಾವದೆ ಕಾರಣಕ್ಕೂ ತಡೆಯಬಾರದು. ರೈತರ ಪಂಪಸೆಟ್ ಗಳಿಗೆ ಮೀಟರ್ ಅಳವಡಿಸುವದು ಹಾಗೂ ರೈತರ ಆಧಾರ ಸಂಖ್ಯೆಯನ್ನು ಆರ್ ಆರ್ ನಂಬರಿಗೆ ಜೋಡಿಸುವ ಈ ವಿವಾದಾತ್ಮಕ ಅದೇಶವನ್ನು ರದ್ದು ಪಡಿಸಬೇಕು. ಕೇಂದ್ರ ಸರ್ಕಾರದ ನರೇಗಾ ಯೋಜನೆಯಲ್ಲಿ ಎಲ್ಲ ರೈತರಿಗೆ ಪ್ರತಿ ಎಕರೆಗೆ ಕನಿಷ್ಟ 50 ಕೂಲಿ ಒದಗಿಸುವ ಕಾಯ್ದೆ ತರಬೇಕು. ಈ ಸಾಲಿನ ಮುಂಗಾರು ಬೆಳೆಯ ಫಸಲ ಭೀಮಾ ಕಂತನ್ನು ರಾಜ್ಯ ಸರ್ಕಾರವೆ ಭರಿಸಬೇಕು.
ರಾಷ್ಟ್ರೀಕೃತ, ಸಹಕಾರಿ, ಸೌಹಾರ್ದ ಬ್ಯಾಂಕ್ ಗಳಲ್ಲಿ ರೈತರು ಮಾಡಿರುವ ಸಾಲದ ಮರುಪಾವತಿಗೆ ಒತ್ತಾಯಿಸದಂತೆ ಬ್ಯಾಂಕ್ ಗಳಿಗೆ ನಿರ್ದೆರ್ಶನ ನೀಡಬೇಕು. ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರ ಹಿತ ದೃಷ್ಟಿಯಿಂದ ಈ ಎಲ್ಲ ಬೇಡಿಕೆಗಳನ್ನು ರಾಜ್ಯ ಸರ್ಕಾರ ತಕ್ಷಣ ಈಡೇರಿಸಬೇಕು. ಬೈಲಹೊಂಗಲ ಉಪವಿಭಾಗದ ವಿದ್ಯುತ್ ಸರಬರಾಜು ಅತ್ಯಂತ ಕಳಪೆ ಮಟ್ಟದ್ದಾಗಿದ್ದು ಹಾಗೂ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಅತ್ಯಂತ ದಯನೀಯ ಸ್ಥಿತಿಗೆ ಹೋಗಿರುವದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ರೈತರಿಗೆ ವಿದ್ಯುತ್ ಒದಗಿಸುವದಾಗಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ, ನಿಂಗಪ್ಪ ಚೌಡಣ್ಣವರ, ಮುರಿಗೆಪ್ಪ ಗುಂಡ್ಲೂರ, ಸುರೇಶ ಹೊಳಿ, ಶ್ರೀಕಾಂತ ಶಿರಹಟ್ಟಿ, ಮೋಹನ ವಕ್ಕುಂದ, ಬಸವರಾಜ ಮೊಕಾಶಿ, ಮಹಾಂತೇಶ ವಿವೇಕಿ, ಶ್ರೀಪತಿ ಪಠಾತ, ಮಡಿವಾಳಪ್ಪ ಬುಳ್ಳಿ, ಪಕೀರ ಪಠಾಣಿ, ಮಡಿವಾಳಪ್ಪ ತಳವಾರ, ಗೌಡಪ್ಪ ಹೊಸಮನಿ, ಸುರೇಶ ವಾಲಿ, ಈರಣ್ಣ ಹುರಳಿ, ಡಾ.ಎಲ್.ಮಲ್ಲಶೆಟ್ಟಿಪ್ಪ, ನಿರಂಜನ ಶಿರೂರ, ಗೋಪಾಲ ಮರಬಸನ್ನವರ , ಮಲ್ಲಪ್ಪ ಗರಜೂರ, ಸೋಮಲಿಂಗ ತೋಟಗಿ ಇತರರು ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


