ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ ಎಲ್ ಎಸ್ ಎ) ವತಿಯಿಂದ ಇದೇ 8ರಂದು ಹೈಕೋರ್ಟ್ ಸೇರಿದಂತೆ ಎಲ್ಲ ಜಿಲ್ಲೆಗಳು ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಈ ಕುರಿತ ವಿವರಗಳನ್ನು ಕೆಎಸ್ ಎಲ್ ಎಸ್ ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಜಿ. ನರೇಂದರ್ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ವಿವರಿಸಿ, ‘ರಾಜ್ಯದಾದ್ಯಂತ ಒಟ್ಟು 20 ಲಕ್ಷದಷ್ಟು ಪ್ರಕರಣಗಳ ವಿಚಾರಣೆ ನಡೆಯಲಿದೆ’ ಎಂದರು.
ರಾಜಿ ಮಾಡಿಕೊಳ್ಳಬಹುದಾದ ನ್ಯಾಯಾಲಯಗಳಲ್ಲಿ ಬಾಕಿಯಿರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಈ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶ’ ಎಂದು ಅವರು ತಿಳಿಸಿದರು.
ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಷೇಮ್‌ಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಪ್ರಕರಣ, ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ, ಚೆಕ್ ಬೌನ್ಸ್, ವೈವಾಹಿಕ, ಕೌಟುಂಬಿಕ ಪ್ರಕರಣಗಳೂ (ವಿಚ್ಛೇದನ ಹೊರತುಪಡಿಸಿ) ಸೇರಿದಂತೆ ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಗಳನ್ನು ಈ ಅದಾಲತ್‌ನಲ್ಲಿ ಪರಿಗಣಿಸಲಾಗುತ್ತದೆ’ ಎಂದರು.
ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಾದ್ಯಂತ ಎರಡು ಕೋಟಿಗೂ ಹೆಚ್ಚು ಟ್ರಾಫಿಕ್ ಚಲನ್ ಪ್ರಕರಣಗಳು ದಂಡ ವಸೂಲಾತಿಗೆ ಬಾಕಿ ಇವೆ. ಇವುಗಳಿಂದ ಸಾವಿರ ಕೋಟಿಗೂ ಹೆಚ್ಚಿನ ದಂಡ ಪಾವತಿಸಿಕೊಳ್ಳಬಹುದಾಗಿದೆ. ಇದರಿಂದ ‘ಕಾನೂನು ಸೇವೆಗಳ ಪ್ರಾಧಿಕಾರವು ಜೂನ್ 14ರಂದು ಸರ್ಕಾರದೊಂದಿಗೆ ಸಭೆ ನಡೆಸಿ ಟ್ರಾಫಿಕ್ ಚಲನ್ ಪ್ರಕರಣಗಳ ದಂಡದಲ್ಲಿ ಶೇ 50ರಷ್ಟು ವಿನಾಯಿತಿ ನೀಡುವಂತೆ ಕೋರಿತ್ತು.
ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 2023ರ ಫೆಬ್ರುವರಿ 1ಕ್ಕೂ ಹಿಂದಿನ ಟ್ರಾಫಿಕ್ ಚಲನ್ ಪ್ರಕರಣಗಳಲ್ಲಿ ಶೇ 50ರ ದಂಡದ ಮೊತ್ತ ವಿನಾಯಿತಿ ನೀಡಿ ಇದೇ 5ರಂದು ಆದೇಶಿಸಿದೆ. ಸಾರ್ವಜನಿಕರು ಈ ಅವಕಾಶದ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ನ್ಯಾಯಮೂರ್ತಿ ಜಿ. ನರೇಂದರ್ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


