ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ಜಯನಗರ ವಿಧಾನಸಭಾ ಕ್ಷೇತ್ರದ ಜಯನಗರ 4ನೇ ಬ್ಲಾಕ್, 11ನೇ ಮುಖ್ಯ ರಸ್ತೆಯ ಯುವ ಪಥ (ಯುವಕ ಸಂಘ)ದಲ್ಲಿ ಇಂದು ನಡೆದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಸಿ. ಕೆ. ರಾಮಮೂರ್ತಿ, ವಲಯ ಆಯುಕ್ತ ಜಯರಾಮ್ ರಾಯಪುರ ರವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಆಯುಕ್ತರಾದ ಜಯರಾಮ್ ರಾಯಪುರ ರವರು ಮಾತನಾಡಿ, ಪಾಲಿಕೆ ವತಿಯಿಂದ ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಕೆಂಪೇಗೌಡರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಬೆಂಗಳೂರು ನಗರ ಕಟ್ಟಿದಂತಹ ಕೆಂಪೇಗೌಡರನ್ನು ನಾವೆಲ್ಲರೂ ಸ್ಮರಿಸಬೇಕು. ಕಳೆದ 15 ವರ್ಷಗಳಿಂದ ಕೆಂಪೇಗೌಡರಿಗೆ ಗೌರವ ಕೊಡಬೇಕಾದ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ದಕ್ಷಿಣ ವಲಯ ವ್ಯಾಪ್ತಿಯ ಲಾಲ್ ಬಾಗ್ ಗಡಿ ಗೋಪುರದಿಂದ ಕೆಂಪಾಂಬುದಿ ಗಡಿ ಗೋಪುರದ ವರೆಗೆ ಸುಮಾರು 13 ಕಿ. ಮೀ ಪ್ರದೇಶದಲ್ಲಿ ಕೆಂಪೇಗೌಡರ ಸರ್ಕ್ಯುಟ್ ಮಾಡಲು ನಿರ್ಧರಿಸಲಾಗಿದ್ದು, 1947ಕ್ಕಿಂತ ಹಿಂದಿನಿಂದಲೂ ಇರುವ ಸ್ಥಳಗಳನ್ನು ಗುರುತಿಸಿ ಪಾರಂಪರಿಕ ಸರ್ಕ್ಯುಟ್ ಮಾಡಲಾಗುವುದು.
ಅಲ್ಲದೆ, ಹಲಸೂರು ಕೆರೆ ಹಾಗೂ ಸೋಮೇಶ್ವರ ದೇವಸ್ಥಾನ, ಸ್ಯಾಂಕಿ ಟ್ಯಾಂಕ್, ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿ ಸಣ್ಣದಾದ ಸರ್ಕ್ಯುಟ್ ಮಾಡಲಾಗುವುದು. ಕೆಂಪೇಗೌಡರ ಸಾಧನೆಗಳ ಬಗ್ಗೆ ನಾಗರಿಕರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು. ಈ ವೇಳೆ ವಲಯ ಜಂಟಿ ಆಯುಕ್ತರಾದ ಡಾ. ಕೆ. ಜಗದೀಶ್ ನಾಯಕ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


