ಬಂಧಿಸಲು ಹೋಗಿದ್ದ ಲೋಕಾಯುಕ್ತ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿ ಪರಾರಿಯಾಗಲು ಮುಂದಾಗಿದ್ದ ಆಹಾರ ನಿರೀಕ್ಷಕ ಮಹಾಂತೇಗೌಡ ಬಿ. ಕಡಬಾಳು ಅವರನ್ನು ಬೆನ್ನಟ್ಟಿ ಬಂಧಿಸಲಾಗಿದೆ.
ಉದ್ದಿಮೆ ಪರವಾನಗಿ ಪರಿಶೀಲನೆಗೆ 143 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರು ಉತ್ತರ ತಾಲ್ಲೂಕಿನ ಆಹಾರ ನಿರೀಕ್ಷಕ ಕಡಬಾಳು ಅವರನ್ನು ಸೆರೆ ಹಿಡಿಯಲು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ತುಮಕೂರು ರಸ್ತೆಯ ಮಂಜುನಾಥ್ ನಗರದ ಶೋಭಾ ಅಪಾರ್ಟ್ ಮೆಂಟ್ ಬಳಿ ಹಣ ಪಡೆಯುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ.
ರಂಗಧಾಮಯ್ಯ ಅವರ ಬಳಿ ಉದ್ದಿಮೆ ಪರವಾನಗಿ ಪರಿಶೀಲನೆಗಾಗಿ ಮಹಾಂತೇಗೌಡ, 11 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 712 ಸಾವಿರವನ್ನು ಮುಂಗಡವಾಗಿ ಪಡೆದುಕೊಂಡಿದ್ದರು. ಬಾಕಿ ಮೊತ್ತವನ್ನು ಶುಕ್ರವಾರ ನೀಡುವಂತೆ ಆರೋಪಿ ಒತ್ತಾಯಿಸಿದ್ದರು. ರಂಗಧಾಮಯ್ಯ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.
ಶುಕ್ರವಾರ ರಂಗಧಾಮಯ್ಯ ಅವರಿಂದ 143 ಸಾವಿರ ಲಂಚದ ಹಣ ಪಡೆದುಕೊಂಡಾಗ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು. ಅದನ್ನು ತಿಳಿದ ಮಹಾಂತೇಗೌಡ ಕಾರು ಏರಿ ಪರಾರಿಯಾಗಲು ಯತ್ನಿಸಿದ್ದರು.
15 ಕಿ. ಮೀವರೆಗೂ ಆರೋಪಿಯನ್ನು ಬೆನ್ನಟ್ಟಿ ಹೋಗಿದ್ದ ಲೋಕಾಯುಕ್ತ ಲೋಕಾಯುಕ್ತ ಪೊಲೀಸರು, ನೆಲಮಂಗಲ ಸೊಂಡೆಕೊಪ್ಪ ರಸ್ತೆಯಲ್ಲಿ ಆರೋಪಿಯ ಕಾರನ್ನು ಸುತ್ತುವರಿದರು. ಪಂಚನಾಮೆಗಾಗಿ ಬಂದಿದ್ದ ಸರ್ಕಾರಿ ನೌಕರರು ಮತ್ತು ಲೋಕಾಯುಕ್ತ ಪೊಲೀಸರ ಮೇಲೆ ವಾಹನ ಹತ್ತಿಸಿ ಪರಾರಿಯಾಗಲು ಆರೋಪಿ ಯತ್ನಿಸಿದರು.
ಲೋಕಾಯುಕ್ತದ ಟಾಟಾ ಸುಮೊ ವಾಹನವನ್ನು ಅಡ್ಡ ನಿಲ್ಲಿಸಿ, ಡಿಕ್ಕಿ ಹೊಡೆಸಿ ಸಾಕ್ಷಿದಾರರು ಮತ್ತು ಪೊಲೀಸರಿಗೆ ಅಪಾಯವಾಗದಂತೆ ತಡೆಯಲಾಗಿದೆ ಎಂದು ಲೋಕಾಯುಕ್ತದ ಬೆಂಗಳೂರು ನಗರ ಎಸ್ ಪಿ ಕೆ. ವಿ. ಅಶೋಕ್ ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಎಸ್. ಶ್ರೀಕಾಂತ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತ್ತು.
ಆರೋಪಿಯನ್ನು ಲಂಚದ ಹಣದ ಸಮೇತ ಬಂಧಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣದ ಜತೆಯಲ್ಲಿ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ವಾಹನ ಹತ್ತಿಸಲು ಯತ್ನಿಸಿದ ಆರೋಪದ ಮೇಲೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಶನಿವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


