ನವದೆಹಲಿ:ಪ್ರಾರಂಭವಾಗುವ ಸಂಸತ್ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಒಟ್ಟು 31 ಮಸೂದೆಗಳನ್ನು ಚರ್ಚಿಸುವ ಸಾಧ್ಯತೆಯಿದೆ. ಇವುಗಳನ್ನು ಈಗಾಗಲೇ ಕೆಳಮನೆಯಲ್ಲಿ ಮಂಡಿಸಲಾಗಿದೆ ಮತ್ತು ಜಂಟಿ ಸಮಿತಿಗಳಿಗೆ ಉಲ್ಲೇಖಿಸಲಾಗಿದೆ.
ಸುದ್ದಿ ಸಂಸ್ಥೆ ಎಎನ್ಐ ಪ್ರಕಟಿಸಿರುವ ಪಟ್ಟಿಯ ಪ್ರಕಾರ, ಡೇಟಾ ರಕ್ಷಣೆ ಮಸೂದೆಯು ಕೇಂದ್ರದ ಕಾರ್ಯಸೂಚಿಯ ಒಂದು ಭಾಗವಾಗಿದೆ. ಇದರ ನಡುವೆ ಸದ್ಯ ದೇಶದ ಎಲ್ಲರ ಕಣ್ಣುಗಳು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಸುಗ್ರೀವಾಜ್ಞೆ, 2023 ಮಸೂದೆಯ ಮೇಲೆ ಇದೆ. ಇದನ್ನು ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ತೀವ್ರವಾಗಿ ಟೀಕಿಸಿದೆ. ವಿಪಕ್ಷಗಳ ಸಭೆಯಲ್ಲಿಯೂ ಇದನ್ನು ಖಂಡಿಸಲಾಗಿದೆ. ಇಷ್ಟು ದಿನ ಈ ಬಗ್ಗೆ ಸುಮ್ಮನಿದ್ದ ಕಾಂಗ್ರೆಸ್ ಕೂಡ ಬಹಿರಂಗವಾಗಿ ಈ ಮಸೂದೆಯನ್ನು ಟೀಕಿಸಿ, ಎಎಪಿಗೆ ಬೆಂಬಲ ಸೂಚಿಸಿದೆ.
ಇತ್ತ ಸರ್ಕಾರವನ್ನ ಇಕ್ಕಟ್ಟಿಗೆ ತಳ್ಳಲು ವಿಪಕ್ಷಗಳು ಸಹ ಸಜ್ಜಾಗಿವೆ. ಮಣಿಪುರ ಗಲಭೆ, ರಾಹುಲ್ ಗಾಂಧಿ ಅನರ್ಹತೆ, ದೆಹಲಿ ಸುಗ್ರೀವಾಜ್ಞೆ, ಪ್ರವಾಹ, ಒರಿಸ್ಸಾ ರೈಲು ದುರಂತ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು ಹಿಡಿಯುವ ಸಾಧ್ಯತೆಗಳಿವೆ.
ಈ ಬಾರಿಯ ಅಧಿವೇಶನದಲ್ಲಿ ಒಟ್ಟು 31 ಬಿಲ್ ಮಂಡನೆ ಸಾಧ್ಯತೆ ಇದೆ. ಈ 31 ಬಿಲ್ ಲೋಕಸಭೆಯಲ್ಲಿ ಸರಾಗವಾಗಿ ಪಾಸ್ ಆಗಲಿದ್ದು ರಾಜ್ಯಸಭೆಯಲ್ಲಿ ಬಿಲ್ ಪಾಸ್ ಮಾಡಲು ವಿಪಕ್ಷಗಳು ಅಡ್ಡಿಗೆ ಯತ್ನಿಸಬಹುದು. ಸದ್ಯ ರಾಜ್ಯ ಸಭೆಯ ಒಟ್ಟು 238 ಸಂಸದರಿದ್ದು, ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಗಳು ಒಟ್ಟಾಗಿ 111 ಸದಸ್ಯರನ್ನು ಹೊಂದಿವೆ (ನಾಮನಿರ್ದೇಶಿತ ಸಂಸದರು ಸೇರಿದಂತೆ) ಬಿಜೆಡಿ, ವೈಎಸ್ಆರ್ಸಿಪಿ, ಬಿಎಸ್ಪಿ, ಟಿಡಿಪಿ ಮತ್ತು ಜೆಡಿಎಸ್ ಹೊರತುಪಡಿಸಿ ಪ್ರತಿಪಕ್ಷಗಳು 106 ಸದಸ್ಯರನ್ನ ಹೊಂದಿದೆ.
ಮುಂಗಾರು ಅಧಿವೇಶನವನ್ನು ಸುಗಮವಾಗಿ ನಡೆಸಲು ನಿನ್ನೆ ಸರ್ವಪಕ್ಷಗಳ ಸಭೆ ನಡೆಸಲಾಗಿದ್ದು, 34 ಪಕ್ಷಗಳು ಮತ್ತು 44 ನಾಯಕರು ಹಾಜರಾಗಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಿಂದ ಪ್ರಾರಂಭವಾಗಿ ಆಗಸ್ಟ್ 11 ರಂದು ಮುಕ್ತಾಯವಾಗಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


