ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ವೇಳೆ ಯಾವುದೇ ನ್ಯೂನ್ಯತೆಗಳಾಗದಂತೆ ಸರಿಯಾದ ಮಾದರಿಯಲ್ಲಿ ಪರಿಷ್ಕರಣೆ ಕಾರ್ಯವಾಗಬೇಕೆಂದು ಮುಖ್ಯ ಆಯುಕ್ತತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಜೊತೆ ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರವರು, ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕಣೆಯ ವೇಳಾಪಟ್ಟಿಯನ್ನು ಹೊರಡಿಸಿದ್ದು, ಅದರಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕಣೆಯು ದಿನಾಂಕ: 21. 07. 2023 ರಿಂದ 21. 08. 2023 ರವರೆಗೆ ನಡೆಯಲಿದೆ.
ನಾಳೆಯಿಂದ ಒಂದು ತಿಂಗಳ ಕಾಲ ಮತಗಟ್ಟೆ ಮಟ್ಟದ ಅಧಿಕಾರಿಗಳು(BLOs) ಮನೆ ಮನೆಗೆ ಭೇಟಿ ನೀಡಿ ಬಿಎಲ್‌ಒ ತಂತ್ರಾಂಶದ ಮೂಲಕ ಮತದಾರರ ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕುವ ಕೆಲಸ ಮಾಡಲಿದ್ದಾರೆ. ಈ ವೇಳೆ ಬೂತ್ ಮಟ್ಟದ ಏಜೆಂಟ್ ಗಳಲ್ಲಿ ಸ್ಥಳದಲ್ಲಿರಬೇಕಿದ್ದು, ಎಲ್ಲಾ ಕಡೆ ಬೂತ್ ಮಟ್ಟದ ಏಜೆಂಟ್ ಗಳನ್ನು ನಿಯೋಜನೆ ಮಾಡಲು ರಾಜಕೀಯ ಪಕ್ಷದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಎಲ್ಲೆಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಕಡಿಮೆಯಿದ್ದಾರೆ ಅಲ್ಲಿ ಕೂಡಲೆ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕುವ ಕೆಲಸವನ್ನು ಎಲ್ಲಾ ಬಿಎಲ್ಒ ಗಳು ಯಾವುದೇ ಲೋಪದೋಷಗಳಿಲ್ಲದಂತೆ ಸರಿಯಾಗಿ ನಿರ್ವಹಿಸಬೇಕು. ಮತದಾರರ ಪಟ್ಟಿಯಲ್ಲಿ ಮರಣ ಹೊಂದಿರುವ ಹಾಗೂ ಬೇರೆಡೆ ಸ್ಥಳಾಂತರಗೊಂಡಿರುವ ಮತದಾರರ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು.
ಮತದಾರರ ಪಟ್ಟಿ ಪರಿಷ್ಕರಣೆ -2024ರಲ್ಲಿ ಹೊಸದಾಗಿ ಹೆಸರು ನೊಂದಾಯಿಸಲು(ನಮೂನೆ 6), ತಿದ್ದುಪಡಿಗಾಗಿ (ನಮೂನೆ 8) ಅರ್ಜಿ ಸಲ್ಲಿಸಬೇಕಿದೆ. ಎಲ್ಲಾ ಪ್ರಕ್ರಿಯೆ ಮುಗಿದ ನಂತರ ದಿನಾಂಕ: 28-08-2023 ರಿಂದ 29-09-2023ರವರೆಗೆ ಮತಗಟ್ಟೆಗಳ ಪುನರ್ ವಿಂಗಡಣಾ ಕಾರ್ಯ ನಡೆಯಲಿದ್ದು, ಮತಗಟ್ಟೆಗಳ ಸ್ಥಳಾಂತರ/ದುರಸ್ಥಿಯಲ್ಲಿರುವ ಮತಗಟ್ಟೆಗಳ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಉಜ್ವಲ್ ಕುಮಾರ್ ಘೋಷ್, ಅರಪ ಜಿಲ್ಲಾ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ಅಜಯ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


