ಮಣಿಪುರದಲ್ಲಿ ಅಮಾನವೀಯ ಘಟನೆಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರ್ಕಾರ ಸತ್ತಿದೆ. ಮಣಿಪುರದ ಮುಖ್ಯಮಂತ್ರಿಯನ್ನು ವಜಾ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು’ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಆಗ್ರಹಿಸಿದರು.
ಎಎಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಶನಿವಾರ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ‘ಕರ್ನಾಟಕದಲ್ಲಿ ಸದನ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡಿದ್ದೀರಿ. ವಾದ, ಪ್ರತಿವಾದ ಮಾಡಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಿಟ್ಟನ್ನು ಮಾತಿನ ಮೂಲಕ ತೋರಿಸಬೇಕು. ಕಾಗದ ಹರಿದು, ಸ್ಪೀಕರ್ ಮೇಲೆ ಎಸೆದು ತೋರಿಸುವುದಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ, ಲೋಕಸಭಾ ಚುನಾವಣೆಗಳು ಒಂದು ವರ್ಷದ ಒಳಗೆ ನಡೆಯಲಿವೆ. ಇದೇ ಸಮಯದಲ್ಲಿ ಘಟಬಂಧನ್ ಕೂಡ ನಡೆದಿದೆ. ನಾವೇನು ಮಾಡಬೇಕು ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುತ್ತದೆ. ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನ ರಕ್ಷಿಸಲು, ಕೋಮುವಾದ ದೂರ ಮಾಡಲು ರಾಷ್ಟ್ರಮಟ್ಟದಲ್ಲಿ ಪಕ್ಷಗಳು ಕೈಜೋಡಿಸಿವೆ. ಆದರೆ, ರಾಜ್ಯದಲ್ಲಿನ ಚುನಾವಣೆಗಳಲ್ಲಿ ನಾವು ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ’ ಎಂದು ಹೇಳಿದರು.
ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ‘ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೀಡಿರುವ ಯೋಜನೆಗಳನ್ನೇ ಕಾಪಿ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳನ್ನು ನೀಡಿದೆ. ಯಾವ ಗ್ಯಾರಂಟಿಯೂ ಯಶಸ್ವಿಯಾಗಲ್ಲ. ಕಮಿಷನ್ ಸೊನ್ನೆ ಇದ್ದಾಗ ಮಾತ್ರ ಯಶಸ್ವಿಯಾಗುತ್ತದೆ. ಅದು ಅವರಿಂದ ಆಗಲ್ಲ. ದೇಶಕ್ಕೆ ಎಎಪಿ ಅವಶ್ಯಕ’ ಎಂದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಂಕಜ್ ಗುಪ್ತ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ದಾಮೋದರ್, ರಾಜ್ಯ ಸಹ ಸಂಘಟಕ ಉಪೇಂದ್ರ ಗೋಯಂಕ, ಕರ್ನಾಟಕ ದಕ್ಷಿಣ ಭಾಗದ ಸಂಘಟನಾ ಕಾರ್ಯದರ್ಶಿ ಬಿ. ಟಿ. ನಾಗಣ್ಣ, ಉತ್ತರ ಭಾಗದ ಸಂಘಟನಾ ಕಾರ್ಯದರ್ಶಿ ಅರ್ಜುನ ಹಲಗಿ ಗೌಡರ ಮಾತನಾಡಿದರು.
‘ನಮ್ಮ ಯೋಜನೆ ಕದ್ದಿರುವ ಕಾಂಗ್ರೆಸ್’, ‘ಕಾಂಗ್ರೆಸ್ ನಮ್ಮ ಯೋಜನೆಗಳನ್ನು ಕದ್ದಿದೆ. ಅವರೇ 2013ರಲ್ಲಿ ಅಧಿಕಾರಕ್ಕೆ ಬಂದಿದ್ದಾಗ ಉಚಿತ ವಿದ್ಯುತ್ ಯಾಕೆ ನೀಡಿಲ್ಲ? ಉಳಿದ ಯೋಜನೆಗಳನ್ನು ಯಾಕೆ ಕೊಟ್ಟಿಲ್ಲ? ಕದ್ದಿರುವ ಮಾಲು ಇಟ್ಟುಕೊಂಡೇ ಮುಖ್ಯಮಂತ್ರಿ ದರ್ಪ ದೌಲತ್ತು ತೋರಿಸುತ್ತಿದ್ದಾರೆ. ಕದ್ದ ಮಾಲು ಬಹಳ ಸಮಯ ಉಳಿಯುವುದಿಲ್ಲ. ಸ್ವಂತದ್ದು ಮಾತ್ರ ಶಾಶ್ವತ’ ಎಂದು ‘ಮುಖ್ಯಮಂತ್ರಿ’ ಚಂದ್ರು ವ್ಯಂಗ್ಯವಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


