ದಲಿತ ಸಮುದಾಯದಲ್ಲಿ ಭೂಮಿ ಶೇ 6ರಷ್ಟು ಇದ್ದರೆ, ಶೇ 78 ಭಾಗ ಮೇಲ್ಟಾತಿ ಕೈಯಲ್ಲಿದೆ. ಇದು ರಾಜಕೀಯ ಶಕ್ತಿಯನ್ನು ಅವರಿಗೆ ತಂದುಕೊಟ್ಟಿದೆ’ ಎಂದು ವಕೀಲ ಹರಿರಾಮ್ ತಿಳಿಸಿದರು. ದಲಿತ ವಿಮೋಚನಾ ಸೇನೆ ವತಿಯಿಂದ ಪ್ರೊ. ಬಿ. ಕೃಷ್ಣಪ್ಪ ಅವರ 85ನೇ ಜಯಂತ್ಯುತ್ಸವದ ಅಂಗವಾಗಿ ನಡೆದ ಬಹುಜನ ಸ್ವಾಭಿಮಾನ ದಿನಾಚರಣೆ ಮತ್ತು ಮಾಳವ ನಾರಾಯಣ ಅವರು ರಚಿಸಿರುವ ‘ಕರ್ನಾಟಕದ ಅಂಬೇಡ್ಕರ್ ಪ್ರೊ. ಬಿ. ಕೃಷ್ಣಪ್ಪ’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೈಗಾರಿಕೆ, ಉದ್ಯಮ, ಮಾಧ್ಯಮ, ಸಹಕಾರಿ ಕ್ಷೇತ್ರಗಳಲ್ಲಿ ದಲಿತರಿಗೆ ನಿರೀಕ್ಷಿತ ಪ್ರಾತಿನಿಧ್ಯ ದೊರೆತಿಲ್ಲ. ಇದರಿಂದಾಗಿ ಆರ್ಥಿಕವಾಗಿಯೂ ಶೂನ್ಯವಾಗಿದ್ದಾರೆ ಎಂದರು.
‘ಶಿಕ್ಷಣ ಪಡೆಯುತ್ತಿರುವ ದಲಿತ ಯುವಸಮುದಾಯದವರಲ್ಲಿ ನಿಮ್ಮ ಗುರಿ ಏನು ಎಂದು ಕೇಳಿದರೆ ಸರ್ಕಾರಿ ಉದ್ಯೋಗ ಪಡೆಯುವುದು ಎಂದು ಹೇಳುತ್ತಿದ್ದಾರೆ. ಆದರೆ, ಈಗಿನ ಉದ್ಯೋಗಗಳಲ್ಲಿ ಶೇ 0. 6ರಷ್ಟು ಮಾತ್ರ ಸರ್ಕಾರಿ ಉದ್ಯೋಗವಾಗಿದೆ. ಅದರಲ್ಲಿ ದಲಿತರಿಗೆ ಶೇ 0. 2ರಷ್ಟು ಮಾತ್ರ ಸಿಗುತ್ತಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಎಚ್. ಗೋವಿಂದಯ್ಯ ಮಾತನಾಡಿ, 12 ಶತಮಾನದಲ್ಲಿ ಅಲ್ಲಮಪ್ರಭು, ಬಸವಣ್ಣರ ನೇತೃತ್ವದಲ್ಲಿ ದಲಿತ ಚಳವಳಿ ನಡೆದಿತ್ತು. ಅದುವೇ ವಚನ ಚಳವಳಿ. ಆನಂತರ ಕನ್ನಡ ನೆಲದಲ್ಲಿ ಎಲ್ಲರನ್ನು ಮುಟ್ಟುವ ಚಳವಳಿ ನಡೆದಿದ್ದೇ ಬಿ. ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ಚಳವಳಿ’ ಎಂದು ಬಣ್ಣಿಸಿದರು.
ಬಣಗಳಿಲ್ಲದ, ಭ್ರಷ್ಟಾಚಾರವಿಲ್ಲದ, ಸ್ವಜನ ಪಕ್ಷಪಾತವಿಲ್ಲದ, ಪ್ರಜಾಪ್ರಭುತ್ವವಾದಿ ದಲಿತ ಚಳವಳಿಯನ್ನು ಕಟ್ಟುವ ಮೂಲಕ ಬ್ರಾಹ್ಮಣವಾದಿ, ನವಬ್ರಾಹ್ಮಣವಾದಿಗಳನ್ನು ಹಿಮ್ಮೆಟ್ಟಿಸಬೇಕು ಎಂದರು. ಕೃತಿ ಪರಿಚಯ ಮಾಡಿದ ಕವಿ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ‘ಬಂಧುತ್ವ ನಾಶವಾಗಿದ್ದರಿಂದಲೇ ಹಿಂದುತ್ವ ಬೆಳೆದಿದೆ. ದಲಿತತ್ವ ಮೂಲಕ ಮತ್ತೆ ಬಂಧುತ್ವ ಕಟ್ಟಬೇಕು. ಎಲ್ಲ ಜಾತಿಗಳನ್ನು ಅಪ್ಪಿಕೊಳ್ಳಬೇಕು’ ಎಂದು ತಿಳಿಸಿದರು.ದಲಿತ ವಿಮೋಚನಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾ. ಮುನಿರಾಜ್ ಅಧ್ಯಕ್ಷತೆ ವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


