ವರದಕ್ಷಿಣೆ ಕಿರುಕುಳಕ್ಕೆ ಬಿ ಇ ಪದವೀಧರೆಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಬ್ಬನ್ ಪೇಟೆಯ 2ನೇ ಮುಖ್ಯ ರಸ್ತೆಯ ಮನೆಯಲ್ಲಿ ಘಟನೆ ನಡೆದಿದೆ. 24 ವರ್ಷದ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ.
ಮೂಲತಃ ಹೊಸೂರಿನವಳಾದ ಐಶ್ವರ್ಯಳನ್ನು 2020 ರಲ್ಲಿ ಕಬ್ಬನ್ ಪೇಟೆಯ ರಾಜೇಂದ್ರನ್ ಮತ್ತು ರತ್ನಾ ದಂಪತಿ ಪುತ್ರ ಮಂಜುನಾಥ್ ಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ 240. ಗ್ರಾಂ ಚಿನ್ನಾಭರಣ ಮತ್ತು 2 ಲಕ್ಷ ವರದಕ್ಷಿಣೆ ನೀಡಲಾಗಿತ್ತು. ಆದರೆ ಮದುವೆ ಬಳಿಕ ಮಂಜುನಾಥ್ ಕುಟುಂಬಸ್ಥರು ಹೆಚ್ಚಿನ ವರದಕ್ಷಿಣೆ ತರುವಂತೆ ಕಾಟ ಕೊಡುತ್ತಿದ್ದರು.
ಹೀಗಾಗಿ ಕಳೆದ ಎಂಟು ತಿಂಗಳ ಹಿಂದೆ ಐಶ್ವರ್ಯಾ ತಾಯಿ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಬಿಚ್ಚಿಕೊಟ್ಟು, 5 ಲಕ್ಷ ಹಣ ನೀಡಿ, ಮಗಳನ್ನ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರಂತೆ. ಆದರೆ ಧನದಾಹಿ ಕುಟುಂಬದವರು ಮತ್ತಷ್ಟು ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ. ಹೀಗಾಗಿ ಕಬ್ಬನ್ ಪೇಟೆಯ ಪತಿ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು, ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣುಬಿಗಿದುಕೊಂಡು ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಐಶ್ವರ್ಯ ಆತ್ಮಹತ್ಯೆಯಿಂದ ಮುದ್ದಾದ ಒಂದೂವರೆ ವರ್ಷದ ಕಂದಮ್ಮನ ಅನಾಥವಾಗಿದೆ.
ಪತಿ ಕುಟುಂಬದ ವರದಕ್ಷಿಣೆ ಕಿರುಕುಳಕ್ಕೆ ಐಶ್ವರ್ಯ ಆತ್ಮಹತ್ಯೆಗೀಡಾಗಿದ್ದಾಳೆ. ಪತಿ ಮಂಜುನಾಥ್, ಮಾವ ರಾಜೇಂದ್ರನ್ ಮತ್ತು ಅತ್ತೆ ರತ್ನಾ ಹಾಗೂ ನಾದಿನಿ ಸುಧಾ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪವನ್ನು ಐಶ್ವರ್ಯ ಪೋಷಕರು ಮಾಡಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


