ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, 435 ಹುಲಿಗಳು ಪತ್ತೆಯಾಗಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂತಾರಾಷ್ಟ್ರೀಯ ಹುಲಿ ದಿನಕ್ಕೆ 2 ದಿನಗಳ ಮುನ್ನ ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಹುಲಿ ಪ್ರಾಧಿಕಾರ (ಎನ್. ಟಿ. ಸಿ. ಎ) ಮಾರ್ಗಸೂಚಿಯ ಪ್ರಕಾರ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ಮಾಡಲಾಗುತ್ತದೆ.
ಇದರ ಭಾಗವಾಗಿ ಆನೆ ಸೇರಿ ಮಾಂಸಹಾರಿ ಮತ್ತು ಸಸ್ಯಹಾರಿ ಪ್ರಾಣಿಗಳ ಗಣತಿಯನ್ನೂ ದೇಶಾದ್ಯಂತ ನಡೆಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಪಶ್ಚಿಮ ಘಟ್ಟದ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕ ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. 2021-22ರ ಅವಧಿಯಲ್ಲಿ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಸಲಾಗಿದೆ. ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ. ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾಳಿ ಕಾನನ ಸೇರಿದಂತೆ 37 ವನ್ಯಜೀವಿ ಧಾಮಗಳಲ್ಲಿ ಒಟ್ಟು 37 ವಿಭಾಗಗಳಲ್ಲಿ ಹುಲಿ ಗಣತಿ ನಡೆಸಲಾಗಿದೆ.
ಈ ಗಣತಿಗೆ ಕ್ಯಾಮರಾ ಟ್ರ್ಯಾಪ್ ಮತ್ತು ಲೈನ್ ಟ್ರಸ್ಪ್ಯಾಕ್ಟ್ ವಿಧಾನ ಬಳಸಲಾಗಿದೆ. ರಾಜ್ಯದ ಎಲ್ಲ ಸಂರಕ್ಷಿತ ಅರಣ್ಯಗಳಲ್ಲಿ ಅಳವಡಿಸಲಾಗಿದ್ದ 5, 399 ಕ್ಯಾಮರಾ ಟ್ರ್ಯಾಪ್‌ನಲ್ಲಿ 66 ಲಕ್ಷಕ್ಕೂ ಹೆಚ್ಚು ವನ್ಯ ಜೀವಿಗಳ ಛಾಯಾಚಿತ್ರ ಕ್ರೋಢೀಕರಣವಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಹುಲಿಗಳ ಚಲನವಲನ, ಪ್ರಾದೇಶಿಕ ಪರಿಮಿತಿ (territory) ಹುಲಿಗಳ ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಹುಲಿಗಳ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.
2022ರಲ್ಲಿ ರಾಜ್ಯದಲ್ಲಿ 435 ಹುಲಿಗಳು ಪತ್ತೆ: 2018ರಲ್ಲಿ ನಡೆದಿದ್ದ ಅಖಿಲ ಭಾರತ ಹುಲಿ ಗಣತಿ ಪ್ರಕಾರ, ಕರ್ನಾಟಕದಲ್ಲಿ ನಡೆದ ಕ್ಯಾಮರಾ ಟ್ರ್ಯಾಪ್ ನಲ್ಲಿ 404 ಹುಲಿಗಳು ಪತ್ತೆಯಾಗಿದ್ದವು. ಇದನ್ನು ವನ್ಯಜೀವಿ ಸಂಖ್ಯಾಶಾಸ್ತ್ರದ ಪ್ರಕಾರ, ವಿಶ್ಲೇಷಿಸಿದಾಗ ರಾಜ್ಯದಲ್ಲಿ 475 ರಿಂದ 573 ಹುಲಿಗಳು ಇರಬಹುದು. 2022ರಲ್ಲಿ ರಾಜ್ಯದಲ್ಲಿ 435 ಹುಲಿಗಳು ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಆಗಬಹುದು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


