ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಗುರುವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಕಾರು ಚಾಲಕ ವರುಣ್ ಬಿ. ಆರ್. (28) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
‘ಸಂಜಯ್ ನಗರದ ನಿವಾಸಿ ವರುಣ್, ಕಂಪನಿಯೊಂದರ ಉದ್ಯೋಗಿ. ನಗರದಿಂದ ವಿಮಾನ ನಿಲ್ದಾಣದತ್ತ ಕಾರಿನಲ್ಲಿ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಇನ್ನೊಂದು ಕಾರಿನ ಚಾಲಕ ಬಿ. ಸಂಜಯ್ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ತಿಳಿಸಿದರು.
‘ವರುಣ್ ಅವರು ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದರು. ಹುಣಸಮಾರನಹಳ್ಳಿ ಮೇಲ್ಲೇತುವೆ ಬಳಿಯ ಡೌನ್ ಬ್ಯಾಂಪ್ ಸಮೀಪ ರಸ್ತೆ ವಿಭಜಕಕ್ಕೆ ಕಾರು ಗುದ್ದಿತ್ತು. ಅದಾದ ಬಳಿಕ ಮುಂದಕ್ಕೆ ನುಗ್ಗಿ ಪಕ್ಕದ ರಸ್ತೆಗೆ ಹೋಗಿದ್ದ ಕಾರು, ಎದುರಿಗೆ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು’ ಎಂದು ಹೇಳಿದರು. ‘ಅಪಘಾತದಿಂದಾಗಿ ಜಖಂಗೊಂಡಿದ್ದ ಕಾರಿನೊಳಗೆ ವರುಣ್ ಸಿಲುಕಿಕೊಂಡಿದ್ದರು. ಅಲ್ಲಿಯೇ ಅವರು ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.’
‘ಇನ್ನೊಂದು ಕಾರಿನಲ್ಲಿದ್ದ ಸಂಜಯ್, ದೀಪಂ ಕ್ಯಾಬ್ ಚಾಲಕ. ಅವರು ವಿಮಾನ ನಿಲ್ದಾಣದಿಂದ ಸಿಂಗಸಂದ್ರಕ್ಕೆ ಹೊರಟಿದ್ದರು. ಸಂಜಯ್ ನೀಡಿರುವ ದೂರು ಆಧರಿಸಿ ವರುಣ್ ವಿರುದ್ಧ ಕ್ರಮ ಜರುಗಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


