ಯಲಹಂಕ ಕೆರೆಯ ಆವರಣದಲ್ಲಿ ಬಿಬಿಎಂಪಿ ಅನುದಾನದಲ್ಲಿ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸ್ವಯಂ ವಿದ್ಯುತ್ ಚಾಲಿತ ಬಟ್ಟೆ ಶುದ್ದೀಕರಣ ಯಂತ್ರೋಪಕರಣಗಳ ಘಟಕ ಹಾಗೂ ಯಲಹಂಕ ‘ಧೋಬಿ ಘಾಟ್’ ಅನ್ನು ಶಾಸಕ ಎಸ್. ಆರ್. ವಿಶ್ವನಾಥ್ ಉದ್ಘಾಟಿಸಿದರು.
ಕೈಯಿಂದ ಬಟ್ಟೆ ಶುಚಿಗೊಳಿಸಲು ಮಡಿವಾಳ ಸಮಾಜಕ್ಕೆ ತಾತ್ಕಾಲಿಕವಾಗಿ ಧೋಬಿ ಘಾಟ್ ನಿರ್ಮಿಸಲಾಗಿತ್ತು. ಯಂತ್ರೋಪಕರಣಗಳಿಂದ ಬಟ್ಟೆ ಶುಚಿಗೊಳಿಸಿ, ಒಣಗಿಸಲು ಹಾಗೂ ಇಸ್ತ್ರಿ ಮಾಡುವ ಯಂತ್ರಗಳನ್ನು ನೀಡಬೇಕು ಎಂದು ಮಾಡಿದ್ದ ಮನವಿಯ ಮೇರೆಗೆ ನೂತನಕಟ್ಟಡ ನಿರ್ಮಿಸಿ, ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಶಾಸಕ ಎಸ್. ಆರ್. ವಿಶ್ವನಾಥ್ ತಿಳಿಸಿದರು.
ಅಟ್ಟೂರು ಕೆರೆಯಲ್ಲಿಯೂ ಧೋಬಿ ಘಾಟ್ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಅನುದಾನದ ಲಭ್ಯತೆ ನೋಡಿಕೊಂಡು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವನಮಹೋತ್ಸವ: ಬಿಬಿಎಂಪಿ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮದಡಿ ಕೆರೆಯ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಜಲಸಿರಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಮು. ಕೃಷ್ಣಮೂರ್ತಿ, ಯಲಹಂಕ ವಲಯದ ಬಿಬಿಎಂಪಿ ಜಂಟಿ ಆಯುಕ್ತರಾದ ಡಾ. ಪೂರ್ಣಿಮಾ, ಉಪ ಆಯುಕ್ತರಾದ ಮಮತಾ, ಕಾರ್ಯಪಾಲಕ ಎಂಜಿನಿಯರ್ ಸುಧಾಕರ ರೆಡ್ಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಸಂಜೀವಯ್ಯ, ಯಲಹಂಕ ಮಡಿವಾಳರ ಸಂಘದ ಅಧ್ಯಕ್ಷ ವೈ. ಎನ್. ನಂಜಪ್ಪ, ಗೌರವಾಧ್ಯಕ್ಷ ಎಂ. ಚಂದ್ರಪ್ಪ, ಕಾರ್ಯಾಧ್ಯಕ್ಷ ವೈ. ಸಿ. ಪಿಳ್ಳಪ್ಪ, ಮುಖಂಡರಾದ ವಿ. ವಿ. ರಾಮಮೂರ್ತಿ, ದಶರಥ ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


