ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ. 22ರಿಂದ 24ರವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ 15ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಮಟಮೇಲಾ ಸಿರಿಲ್ ರಾಮಫೋಸಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
2019 ರಿಂದ ಇದು ಮೊದಲ ನೇರ ಬ್ರಿಕ್ಸ್ ಶೃಂಗ ಸಭೆಯಾಗಿದೆ. ಬ್ರಿಕ್ಸ್ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸುವುದು ಮತ್ತು ಭವಿಷ್ಯದ ಚಟುವಟಿಕೆಗಳನ್ನು ಯೋಜಿಸುವುದು ಶೃಂಗಸಭೆಯ ಕಾರ್ಯ ಸೂಚಿಯಾಗಿದೆ. ಬ್ರಿಕ್ಸ್ ಶೃಂಗಸಭೆಯ ನಂತರ, ಪ್ರಧಾನಮಂತ್ರಿಯವರು ಬ್ರಿಕ್ಸ್ ಆಫ್ರಿಕಾ ಔಟ್ರೀಚ್, ಬ್ರಿಕ್ಸ್ ಪ್ಲಸ್ ಸಂವಾದದಲ್ಲೂ ಭಾಗವಹಿಸಲಿದ್ದಾರೆ. ಪ್ರಧಾನಿಯವರು ಜೋಹಾನ್ಸ್‌ಬರ್ಗ್‌ನಲ್ಲಿ ವಿವಿಧ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಬ್ರಿಕ್ಸ್ ಶೃಂಗಸಭೆಯ ನಂತರ ಪ್ರಧಾನಿ ಗ್ರೀಸ್ ಗೂ ಭೇಟಿ ನೀಡಲಿದ್ದಾರೆ. ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗ್ರೀಸ್ ಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. 25ರಂದು ಅಧಿಕೃತ ಭೇಟಿಯ ಮೇರೆಗೆ ಪ್ರಧಾನಿ ಗ್ರೀಸ್ ಗೆ ಆಗಮಿಸಲಿದ್ದಾರೆ.
40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಗ್ರೀಸ್ ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು. ಪ್ರಧಾನ ಮಂತ್ರಿಯವರು ಉಭಯ ದೇಶಗಳ ವ್ಯಾಪಾರ ನಾಯಕರು ಮತ್ತು ಗ್ರೀಸ್ ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.


