ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ತೀನ್ ಮೂರ್ತಿ ಭವನ ಆವರಣದಲ್ಲಿರುವ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯನ್ನು ‘ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಕ್ಯಾಬಿನೆಟ್ ಸಚಿವಾಲಯದ ಅಧಿಸೂಚನೆ ತಿಳಿಸಿದೆ.
ಭಾರತ ಸರ್ಕಾರದ ನಿಯಮಗಳು, 1961 ರ ಎರಡನೇ ಶೆಡ್ಯೂಲ್ನ ‘ಸಂಸ್ಕೃತಿ ಸಚಿವಾಲಯ ಶೀರ್ಷಿಕೆಯಡಿಯ ನಮೂದು 9 ರಲ್ಲಿ, ‘ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ’ ಎಂಬ ಪದಕ್ಕೆ ಬದಲಾಗಿ ‘ಪ್ರಧಾನಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ’ ಎಂಬ ಪದವನ್ನು ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಎನ್ ಎಂಎಂಎಲ್ ನ ಉಪಾಧ್ಯಕ್ಷರೂ ಆಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ಜೂನ್ 17 ರಂದು ನಡೆದ ವಿಶೇಷ ಸಭೆಯಲ್ಲಿ ಸಂಸ್ಥೆಯ ಹೆಸರನ್ನು ಬದಲಾಯಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.


