ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಬ್ಯಾಂಕ್ ನಿಂದ 538 ಕೋಟಿ ರೂಪಾಯಿ ವಂಚನೆ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಒಂದು ದಿನದ ವಿಚಾರಣೆಯ ನಂತರ ಇಡಿ ಬಂಧನವಾಗಿದೆ. ನಾಳೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇಡಿ ಪ್ರಕರಣವು ಈ ವರ್ಷದ ಮೇ ಆರಂಭದಲ್ಲಿ ಸಿಬಿಐ ದಾಖಲಿಸಿದ ಎಫ್ ಐಆರ್ ಅನ್ನು ಆಧರಿಸಿದೆ.
ಕೆನರಾ ಬ್ಯಾಂಕ್ ಗೆ 538 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಜೆಟ್ ಏರ್ ವೇಸ್, ಗೋಯಲ್, ಅವರ ಪತ್ನಿ ಅನಿತಾ ಮತ್ತು ಕೆಲವು ಮಾಜಿ ಕಂಪನಿ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿತ್ತು. ಜೆಟ್ ಏರ್ ವೇಸ್ ಗೆ 848.86 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿದ್ದು, ಅದರಲ್ಲಿ 538.62 ಕೋಟಿ ರೂಪಾಯಿ ಬಾಕಿ ಇದೆ ಎಂದು ಆರೋಪಿಸಿ ಬ್ಯಾಂಕ್ ನ ದೂರಿನ ಮೇರೆಗೆ ಎಫ್ ಐಆರ್ ದಾಖಲಿಸಲಾಗಿದೆ.
ಎಫ್ ಐಆರ್ ಪ್ರಕಾರ, ಗೋಯಲ್ ಕುಟುಂಬದ ಉದ್ಯೋಗಿಗಳ ವೈಯಕ್ತಿಕ ವೆಚ್ಚಗಳಾದ ಸಂಬಳ, ಫೋನ್ ಬಿಲ್ ಗಳು ಮತ್ತು ವಾಹನ ವೆಚ್ಚಗಳನ್ನು ಜೆಟ್ ಏರ್ ವೇಸ್ ಪಾವತಿಸಿದೆ. ಏರ್ ವೇಸ್ ನ ಹಣವನ್ನು ಸಾಲ, ಮುಂಗಡ ಇತ್ಯಾದಿಯಾಗಿ ತಿರುಗಿಸಲಾಗಿದೆ ಎಂದು ಕಂಡುಬಂದಿದೆ.


