ಬೆಂಗಳೂರು: ರಾಜ್ಯದಲ್ಲಿ ಆತಂಕ ಸೃಷ್ಟಿಮಾಡಿರುವ ಡೆಂಗ್ಯೂ ಕಳೆದ 2022ರ ಇಡೀ ವರ್ಷಪೂರ್ತಿ ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆ 5,522 ಪ್ರಕರಣಗಳು ವರದಿಯಾಗಿತ್ತು. ಅದರಲ್ಲಿ ಬಿಬಿಎಂಪಿಯೊಂದರಲ್ಲೇ 1,058 ಪ್ರಕರಣಗಳು ಹಾಗೂ 4464 ಡೆಂಗ್ಯೂ ಪಾಸಿಟಿವ್ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿತ್ತು. ಆದರೆ ಈ ಬಾರಿ ಕೇವಲ 8 ತಿಂಗಳು ಮೂರು ದಿನದಲ್ಲಿ 6,706 ಡೆಂಗ್ಯೂ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, 2022ರ ಇಡೀ ವರ್ಷಕ್ಕಿಂತ ಈ ಬಾರಿ, 8 ತಿಂಗಳಲ್ಲಿ ಡೆಂಗ್ಯೂ ಪಾಸಿಟಿವ್ ಬಿಬಿಎಂಪಿಯಲ್ಲಿ ಹೆಚ್ಚಳವಾಗಿರುವುದು ತಿಳಿದು ಬಂದಿದೆ.
2023ರ ಜನವರಿಯಿಂದ ಸೆಪ್ಟೆಂಬರ್ 2ನೇ ತಾರೀಖಿನ ವರೆಗೆ ರಾಜ್ಯದಲ್ಲಿ ಒಟ್ಟಾರೆ 6,706 ಡೆಂಗ್ಯೂ ಜ್ವರ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 3,454 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಪಾಲಿಕೆ ಹೊರತುಪಡಿಸಿ ರಾಜ್ಯದಲ್ಲಿ 3,252 ಪ್ರಕರಣಗಳು ಕಂಡು ಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ಆರಂಭದಿಂದ ಹೆಚ್ಚಾಗಿರುವುದು ಕಂಡು ಬಂದಿದೆ. ಜೂನ್ ತಿಂಗಳಿನಲ್ಲಿ ಕೇವಲ 25 ಪ್ರಕರಣಗಳಿದ್ದರೆ, ಜುಲೈ ತಿಂಗಳಿನಲ್ಲಿ 1,649 ಪ್ರಕರಣಗಳು ಕಂಡು ಬಂದಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ 2,374ನಷ್ಟು ವರದಿಯಾಗಿತ್ತು. ಆದರೆ ಸೆಪ್ಟೆಂಬರ್ 1ರಿಂದ 3ನೇ ತಾರೀಖಿನವರೆಗೆ ಕೇವಲ ಮೂರು ದಿನದಲ್ಲಿ ಈ ಪ್ರಮಾಣ 181ಕ್ಕೆ ತಲುಪಿದೆ.
ರಸ್ತೆ ಖಾಲಿ ನಿವೇಶನ, ಗುಂಡಿ ಬಿದ್ದ ತೆರೆದ ನೀರಿನ ಸ್ಥಳದಲ್ಲಿ ಸೊಳ್ಳೆಗಳು ಜಾಸ್ತಿ ಕಾಣಿಸಿಕೊಂಡು ಆ ಮೂಲಕ ನಾಗರೀಕರು ಡೆಂಗ್ಯೂಗೆ ತುತ್ತಾಗುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪವೂ ವ್ಯಕ್ತವಾಗುತ್ತಿದೆ.


