ಜೈಪುರದಲ್ಲಿ ಪಟಾಕಿ ಸದ್ದು ಕೇಳಿದ ವಿದೇಶಿ ಪ್ರವಾಸಿ ಹೋಟೆಲ್ ನ ಎರಡನೇ ಮಹಡಿಯಿಂದ ಜಿಗಿದಿದ್ದಾನೆ. ಜೈಪುರದ ಜವಾಹರ್ ವೃತ್ತದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. 33 ವರ್ಷದ ನಾರ್ವೇಜಿಯನ್ ಫಿನ್ ವೆಟೆಲಿನ್ ಅವರ ಒಂದು ಕೈ ಮತ್ತು ಎರಡೂ ಕಾಲುಗಳು ಮುರಿದಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಜೈಪುರ ತಲುಪಿದ ಅವರು ನ್ಯೂ ಏರ್ ಪೋರ್ಟ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಕೊಠಡಿ ಕಾಯ್ದಿರಿಸಿದ್ದಾರೆ. ಅಂದು ರಾತ್ರಿ, ಜನ್ಮಾಷ್ಟಮಿ ಆಚರಣೆಯ ಅಂಗವಾಗಿ, ಅವರು ಹತ್ತಿರದ ದೇವಸ್ಥಾನದಲ್ಲಿ ಪಟಾಕಿ ಸಿಡಿಸುವುದನ್ನು ಕೇಳಿ ಎರಡನೇ ಮಹಡಿಯಿಂದ ಕೆಳಗೆ ಹಾರಿದರು. ಬಿದ್ದ ರಭಸಕ್ಕೆ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಪಟಾಕಿ ಸಿಡಿಸುವ ವೇಳೆ ನಿದ್ದೆಯಲ್ಲಿದ್ದ ಯುವಕ, ಕೊಠಡಿಯಲ್ಲಿ ಯಾರೋ ಗುಂಡು ಹಾರಿಸಿದ ಸದ್ದು ಕೇಳಿದ ಅನುಭವವಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


