ಖ್ಯಾತ ವ್ಯಂಗ್ಯ ಚಿತ್ರಕಾರ ಅಜಿತ್ ನೈನಾನ್ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಸಾವಿಗೆ ಹೃದಯಾಘಾತವೇ ಕಾರಣ ಎಂದು ಕುಟುಂಬದವರು ತಿಳಿಸಿದ್ದಾರೆ. ಇಂಡಿಯಾ ಟುಡೇ ಮ್ಯಾಗಜೀನ್ ನಲ್ಲಿನ ಕಾರ್ಟೂನ್ ಸರಣಿ ‘ಸೆಂಟ್ರೆಸ್ಟೇಜ್’ ಮತ್ತು ಟೈಮ್ಸ್ ಆಫ್ ಇಂಡಿಯಾದಲ್ಲಿ ‘ನಿನಾನ್ಸ್ ವರ್ಲ್ಡ್’ ಗಾಗಿ ಅವರು ಪ್ರಸಿದ್ಧರಾಗಿದ್ದರು.
ಮಕ್ಕಳ ನಿಯತಕಾಲಿಕೆ ಟಾರ್ಗೆಟ್ ನಲ್ಲಿನ ‘ಡಿಟೆಕ್ಟಿವ್ ಮೂಚ್ ವಾಲಾ’ ಅವರ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಔಟ್ ಲುಕ್ ನಲ್ಲಿ ಕೆಲಸ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಎಲ್ಲಾ ಆವೃತ್ತಿಗಳಲ್ಲಿ ಅವರ ಕಾರ್ಟೂನ್ ಅಂಕಣಗಳು ಕಾಣಿಸಿಕೊಂಡವು. ಅವುಗಳೆಂದರೆ ಜಸ್ಟ್ ಲೈಕ್ ದಟ್ (ಡೈಲಿ), ಲೈಕ್ ದಟ್ ಓನ್ಲಿ (ಪೈವೀಕ್ಲಿ), ಸಿಇಒ ಟೂನ್ಸ್ (ಡೈಲಿ) ಮತ್ತು ಎಂಡ್ – ಕ್ರೆಸ್ಟ್ (ಸಾಪ್ತಾಹಿಕ).
ಅವರು ಮೇ 15, 1955 ರಂದು ಹೈದರಾಬಾದ್ ನಲ್ಲಿ ಎ.ಎಮ್ ಮ್ಯಾಥ್ಯೂ ಮತ್ತು ಆನಿ ಮ್ಯಾಥ್ಯೂಗೆ ಜನಿಸಿದರು. ಇವರು ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಅಬು ಅಬ್ರಹಾಂ ಅವರ ಸೋದರಳಿಯ. ಪತ್ನಿ ಎಲಿಜಬೆತ್ ನೈನಾನ್. ಸಂಯುಕ್ತಾ ಮತ್ತು ಅಪರಾಜಿತಾ ಮಕ್ಕಳು. ನೈನಾನ್ ಅವರಿಗೆ 1986 ರಲ್ಲಿ ಪತ್ರಿಕೋದ್ಯಮಕ್ಕಾಗಿ ಸಂಸ್ಕೃತಿ ಪ್ರಶಸ್ತಿಯನ್ನು ನೀಡಲಾಯಿತು. ಎಕ್ಸ್ ಪ್ಲಾಟ್ ಫಾರ್ಮ್ ಮೂಲಕ ಅವರ ನಿಧನಕ್ಕೆ ಭಾರತೀಯ ಕಾರ್ಟೂನಿಸ್ಟ್ ಸಂಸ್ಥೆ ಸಂತಾಪ ಸೂಚಿಸಿದೆ.


