ಬೆಂಗಳೂರು: ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದಾಗ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ.ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಕುಸಿದು ಬಿದ್ದಿದ್ದು, ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಚೈತ್ರಾ ಬಾಯಿಯಲ್ಲಿ ನೊರೆ ಬಂದ ದೃಶ್ಯ ಸೆರೆಯಾಗಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಚೈತ್ರಾ ಮೂರ್ಛೆ ರೋಗದಿಂದ ಬಳಲುತ್ತಿದ್ದು, ವಿಚಾರಣೆ ವೇಳೆ ಪ್ರಜ್ಞೆ ತಪ್ಪಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಚೈತ್ರಾ ಕುಂದಾಪುರ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾಳೆ.ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಿಂದ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆ ತಂದ ವೇಳೆ ಮಾತನಾಡಿದ ಚೈತ್ರಾ ಕುಂದಾಪುರ, ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಬಂಧನದ ನಂತರ ಎಲ್ಲ ದೊಡ್ಡ ದೊಡ್ಡವರ ಹೆಸರುಗಳು ಹೊರಗೆ ಬರಲಿವೆ. ಸ್ವಾಮೀಜಿ ಸಿಕ್ಕಾಕೊಂಡ ಬಳಿಕ ಎಲ್ಲದೂ ಗೊತ್ತಾಗಲಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಯಿದೆ. ಅದಕ್ಕಾಗಿ ಈ ಷಡ್ಯಂತ್ರ ರೂಪಿಸಿ ನನ್ನನ್ನು ಸಿಲುಕಿಸಿದ್ದಾರೆ ಎಂದು ಆರೋಪ ಮಾಡಿದ್ದಾಳೆ.
ಇನ್ನು ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸಲು ಹಣ ಪಡೆದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.


