ನವದೆಹಲಿ: ಹಳೆಯ ಸಂಸತ್ ಭವನವು ದೇಶದ ಏಳಿಗೆಯ, ಅಭಿವೃದ್ಧಿಯ ಹಾಗೂ ಪ್ರಜಾಪ್ರಭುತ್ವ ಸಂಕೇತವಾಗಿದೆ. ಸಂಸತ್ ಭವನವನ್ನು ಬ್ರಿಟಿಷರು ನಿರ್ಮಿಸಿದರೂ, ಇದರ ನಿರ್ಮಾಣಕ್ಕೆ ಭಾರತೀಯರ ಬೆವರು ಹರಿದಿದೆ, ಭಾರತೀಯರ ಹಣ ಖರ್ಚಾಗಿದೆ. ನಾವು ಹೊಸ ಸಂಸತ್ ಭವನ ಪ್ರವೇಶಿಸುತ್ತಿದ್ದರೂ, ಮುಂಬರುವ ಪೀಳಿಗೆಗೆ ಹಳೆಯ ಸಂಸತ್ ಭವನದ ಇತಿಹಾಸ, ಶ್ರೇಷ್ಠತೆ, ಕೊಡುಗೆಯನ್ನು ತಿಳಿಸಬೇಕಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹಳೆಯ ಭವನದಲ್ಲಿ ಕೊನೆಯ ಅಧಿವೇಶನದ ದಿನವಾದ ಇಂದು ಹಳೆಯ ಸಂಸತ್ ಭವನದ ಕುರಿತು ಮಾತನಾಡಿದ ಅವರು, ಹಳೆಯ ಸಂಸತ್ ಭವನದಿಂದ ಹೊಸ ಸಂಸತ್ತಿಗೆ ತೆರಳುತ್ತಿರುವುದು ಕಷ್ಟವಾಗುತ್ತಿದೆ. ಯಾವುದೇ ಕುಟುಂಬವು ಒಂದು ಮನೆಯನ್ನು ಬಿಟ್ಟು ಹೋಗುವುದು ಎಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತದೆಯೋ, ಅಷ್ಟೇ ಭಾವನಾತ್ಮಕ ಕ್ಷಣಗಳಿಗೆ ಹಳೆಯ ಸಂಸತ್ ಭವನವು ದೂಡಿದೆ. ಆದರೆ, ಈ ಸಂಸತ್ ಭವನದ ನೆನಪುಗಳು ಎಂದಿಗೂ ನಮ್ಮ ಸ್ಮೃತಿಪಟಲದಲ್ಲಿ ಇರುತ್ತವೆ. ಸಂಸತ್ ನಲ್ಲಿ ಅಭಿವೃದ್ಧಿ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ, ಕ್ರಾಂತಿಕಾರಕ ಹೆಜ್ಜೆ ಇರಿಸಲಾಗಿದೆ, 75 ವರ್ಷಗಳಿಂದ ದೇಶದ ಏಳಿಗೆಗೆ ಸಂಸತ್ ಭವನ ಸಾಕ್ಷಿಯಾಗಿದೆ. ಸಂಸತ್ನಲ್ಲಿ ಕೆಲವೊಮ್ಮೆ ಗಲಾಟೆಯೂ ನಡೆದಿದೆ. ಆದರೆ, ಇದು ದೇಶದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ತಿಳಿಸಿದರು.
ನಾನು ಮೊದಲ ಬಾರಿಗೆ ಸಂಸತ್ ಭವನವನ್ನು ಪ್ರವೇಶಿಸಿದಾಗ, ಭವನದ ಮೆಟ್ಟಿಲುಗಳಿಗೆ ನಾನು ನಮನ ಸಲ್ಲಿಸಿದ್ದೆ. ಪ್ರಜಾಪ್ರಭುತ್ವದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ನಮನ ಸಲ್ಲಿಸಿದ್ದೆ. ಆಗ ನನಗೆ ಭಾವನಾತ್ಮಕ ಕ್ಷಣವಾಗಿತ್ತು. ಬಡ ಕುಟುಂಬದ ವ್ಯಕ್ತಿಯೊಬ್ಬ ಸಂಸತ್ತಿನ ಮೆಟ್ಟಿಲು ಹತ್ತುವ ಕ್ಷಣವು ನನಗೆ ಭಾವುಕ ಕ್ಷಣವಾಗಿತ್ತು. ನಾನು ಅಂತಹ ಹುದ್ದೆ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಇದೇ ಪ್ರಜಾಪ್ರಭುತ್ವ ಹಾಗೂ ಸಂಸತ್ ಭವನದ ಸೌಂದರ್ಯವಾಗಿದೆ ಎಂದು 2014ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸುವ ವೇಳೆ ನಮನ ಸಲ್ಲಿಸಿದ ಕುರಿತು ಉಲ್ಲೇಖಿಸಿದರು.
“ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಭಾರತವು ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ದೇಶವು ಏಳಿಗೆಯತ್ತ ಸಾಗುತ್ತಿದೆ. ನಾಲ್ಕೂ ದಿಕ್ಕುಗಳಿಂದ ಭಾರತದ ಬಗ್ಗೆ ಹೆಮ್ಮೆ, ಗೌರವದ ಮಾತುಗಳು ಕೇಳಿಬರುತ್ತಿವೆ. ಚಂದ್ರಯಾನ 3 ಮಿಷನ್ ಯಶಸ್ಸಿನ ಬಳಿಕವಂತೂ ಜಾಗತಿಕವಾಗಿ ಭಾರತದ ಬಗ್ಗೆ ಅಭಿಪ್ರಾಯವೇ ಬದಲಾಗಿದೆ. ವಿಜ್ಞಾನ, ಇಚ್ಛಾಶಕ್ತಿ, ಜನರ ಸಂಕಲ್ಪದಿಂದ ಇದೆಲ್ಲ ಸಾಕಾರವಾಗಿದೆ. ಸದನದ ಪರವಾಗಿ ದೇಶದ ವಿಜ್ಞಾನಿಗಳಿಗೆ ಕೋಟಿ ಕೋಟಿ ಅಭಿನಂದನೆಗಳು ಎಂದರು.


