ತೃಣಮೂಲ ಕಾಂಗ್ರೆಸ್ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ದಸ್ತಿದಾರ್ ಪ್ರಶ್ನಿಸಿದ್ದಾರೆ. ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪಕ್ಷವು ಮಹಿಳೆಯರಿಗೆ ಗೌರವ ನೀಡಬೇಕು ಎಂದು ದಸ್ತಿದಾರ್ ಹೇಳಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿ ಬರಸಮ್‌ನ ಟಿಎಂಸಿ ಸಂಸದ ಸಂಸತ್ತಿನಲ್ಲಿ ಮಾತನಾಡುತ್ತಿದ್ದರು.
ದೇಶಕ್ಕಾಗಿ ಚಿನ್ನದ ಪದಕ ಗೆದ್ದ ನಮ್ಮ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ನ್ಯಾಯಕ್ಕಾಗಿ ಜಂತರಂಮಂದಿರದಲ್ಲಿ ಪ್ರತಿಭಟನೆ ನಡೆಸಬೇಕಾಯಿತು. ಆದರೂ ಬ್ರಿಜ್ ಭೂಷಣ್ ಸಿಂಗ್ ಇಂದು ಇಲ್ಲಿ ಕುಳಿತಿದ್ದಾರೆ. ತಪ್ಪಿತಸ್ಥನನ್ನು ಏಕೆ ನ್ಯಾಯದ ಮುಂದೆ ತರಬಾರದು? ನಿಮಗೆ ಮಹಿಳೆಯರ ಪ್ರಗತಿ ಮತ್ತು ಉನ್ನತಿ ಬೇಕಾದರೆ, ನಿಮಗೆ ನಿಜವಾಗಿಯೂ ಅದರ ಬಗ್ಗೆ ಕಾಳಜಿ ಇದ್ದರೆ, ಬ್ರಿಜ್ ಭೂಷಣ್ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು? – ಎಂದು ಟಿಎಂಸಿ ಸಂಸದರು ಪ್ರಶ್ನಿಸಿದರು.
ಹತ್ರಾಸ್ ಮತ್ತು ಉನ್ನಾವ್ ಅತ್ಯಾಚಾರ-ಕೊಲೆ ಪ್ರಕರಣಗಳಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ದಸ್ತಿದಾರ್ ಕೇಳಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ ಅನೇಕ ಮಹಿಳೆಯರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರೂ ಅವರ ವೇತನ ಇನ್ನೂ ಪಾವತಿಯಾಗಿಲ್ಲ. ಇಸ್ರೋ ಮತ್ತು ಐಐಟಿಗಳಲ್ಲಿನ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ವೇತನವನ್ನು ನಿರಾಕರಿಸಲಾಗುತ್ತಿದೆ ಎಂದು ದಸ್ತಿದಾರ್ ಆರೋಪಿಸಿದ್ದಾರೆ.
ಈ ಮಸೂದೆಯನ್ನು ತರಲು ಎನ್‌ಡಿಎ ಮೈತ್ರಿಕೂಟಕ್ಕೆ ಏಕೆ ಇಷ್ಟು ಸಮಯ ತೆಗೆದುಕೊಂಡಿತು ಎಂದೂ ಟಿಎಂಸಿ ಸಂಸದರು ಪ್ರಶ್ನಿಸಿದ್ದಾರೆ. 2014ರಲ್ಲೇ ಈ ಮಸೂದೆಯನ್ನು ಏಕೆ ತರಲಿಲ್ಲ? ಲೋಕಸಭೆ ಚುನಾವಣೆಗೆ ಕೇವಲ ಆರು ತಿಂಗಳಿರುವಾಗ ಈ ಮಸೂದೆಯನ್ನು ಏಕೆ ತರಬೇಕು? ಡಿಲಿಮಿಟೇಶನ್ ಮಸೂದೆಗೆ ಲಿಂಕ್ ಏಕೆ? ಇದು ಸಂಪೂರ್ಣ ತಪ್ಪು- ದಸ್ತಿದಾರ್ ಹೇಳಿದರು.


