ಬೆಂಗಳೂರು: ರಾಜ್ಯ ಸರ್ಕಾರ ಸಮರ್ಪಕ ವಾದ ಮಾಡದೆ ಇದ್ದುದರಿಂದ, ವಾಸ್ತವಿಕ ಸ್ಥಿತಿಯನ್ನು ಸಮರ್ಥವಾಗಿ ಮನದಟ್ಟು ಮಾಡಿಕೊಡಲು ವಿಫಲವಾಗಿದ್ದರಿಂದ ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ನೀರು ಬಿಟ್ಟು ತಪ್ಪು ಮಾಡಿತು. ಈಗ ಕೋರ್ಟ್ ಮುಂದೆ ಸಮರ್ಪಕವಾದ ವಾದ ಮಂಡಿಸುವಲ್ಲಿ ವಿಫಲವಾಯಿತು. ಸರಿಯಾಗಿ ಹೋಂ ವರ್ಕ್ ಮಾಡದೆ ಕೋರ್ಟ್ ಮೆಟ್ಟಿಲೇರಿರುವುದು ಸಾಬೀತಾಗಿದೆ ಎಂದರು.
ಕೋರ್ಟ್ ಆದೇಶಕ್ಕೂ ಮೊದಲೇ ನೀರು ಬಿಟ್ಟು ತಪ್ಪು ಮಾಡಿದರು. ಈಗ ಕೋರ್ಟ್ ನಲ್ಲಿ ಸರಿಯಾಗಿ ವಾದ ಮಂಡಿಸದೇ ವಿಫಲರಾದರು. ನಾವು ನೀಡುವ ಅಂಕಿ ಅಂಶಗಳ ಮೇಲೆ ಕೋರ್ಟ್ ಆದೇಶ ನೀಡುತ್ತದೆ, ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಮರ್ಥವಾಗಿ ವಾದ ಮಾಡದಿರುವುದು ಹಿನ್ನಡೆಗೆ ಕಾರಣವಾಗಿದೆ ಎಂದರು.
ಸರ್ಕಾರ ಮೊದಲಿನಿಂದಲು ಕಾವೇರಿ ವಿಚಾರದಲ್ಲಿ ತಪ್ಪು ಮಾಡಿಕೊಂಡು ಬಂದಿದೆ. ಡಿಎಂಕೆ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ಕೂಡಾ ಇದಕ್ಕೆ ಒಂದು ಕಾರಣ ಎಂದು ಯಡಿಯೂರಪ್ಪ ಆಕ್ಷೇಪಿಸಿದರು. ಇನ್ನಾದರೂ ಕಾಂಗ್ರೆಸ್ ನಾಯಕರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ. ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ, ಕಾಂಗ್ರೆಸ್ ತನ್ನ ಮಿತ್ರ ಪಕ್ಷವಾದ ಡಿಎಂಕೆಯ ನಾಯಕರ ಜೊತೆ ಮಾತನಾಡಬೇಕು ಎಂದು ಅವರು ಹೇಳಿದರು.


