ಬೆಂಗಳೂರು: ಸರ್ವರಿಗೂ ಆಶ್ರಯ, ಅನ್ನ, ಅಕ್ಷರ ಕೊಟ್ಟ ಮಠಗಳ ಕಾರ್ಯ ಮಹತ್ವದ್ದು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಬಸವಾದಿ ಪ್ರಮಥರ ಸತ್ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸುತ್ತಾ, ಸರ್ವರ ಏಳಿಗೆಗೆ ಶ್ರಮಿಸುತ್ತಿರುವ ವೀರಶೈವ, ಲಿಂಗಾಯಿತ ಧರ್ಮ ಶ್ರೇಷ್ಠವಾದ್ದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿಂದು ಕರ್ನಾಟಕ ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದ 3ನೇ ವಾರ್ಷಿಕೋತ್ಸವ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ನಾಗರಿಕ ಸೇವೆಗಳಿಗೆ ನೇಮಕಗೊಂಡ, ಪದೋನ್ನತಿ ಹೊಂದಿದ ಅಧಿಕಾರಿಗಳು, ವಿಶ್ವ ವಿದ್ಯಾಲಯಗಳಿಗೆ ಕುಲಪತಿಗಳಾಗಿ ನೇಮಕಗೊಂಡಿರುವ ಸಮುದಾಯದ ಗಣ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಎಲ್ಲ, ಜಾತಿ, ಮತ, ಧರ್ಮದವರಿಗೆ ಅಕ್ಷರ, ಅನ್ನ, ಆಶ್ರಯ ನೀಡಿ ಜ್ಞಾನವಂತರನ್ನಾಗಿ ಮಾಡುತ್ತಿರುವ ಸಮಾಜದ ಮಠ ಮಾನ್ಯಗಳ ಕೊಡುಗೆ ಅಪಾರವಾದ್ದು ಎಂದು ಹೇಳಿದರು.
ಸಮಾಜ ನಮಗೇನು ಕೊಟ್ಟಿದೆ ಎಂದು ಪ್ರಶ್ನಿಸುವ ಬದಲು, ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಿ, ಭವ್ಯ ಪರಂಪರೆಯ ಸಮಾಜದಿಂದ ಬಂದಿರುವ ನೀವು ನಿಮಗೆ ದೊರೆತಿರುವ ಅಧಿಕಾರವನ್ನು ಸಂವಿಧಾನಾತ್ಮಕವಾಗಿ ಚಲಾಯಿಸಿ, ರಾಜ್ಯದ ಅಭಿವೃದ್ಧಿಗೆ, ಬಡವರ ಕಲ್ಯಾಣಕ್ಕೆ ಶ್ರಮಿಸಿ ಎಂದು ಕರೆ ನೀಡಿದರು.
ವೀರಶೈವ ಲಿಂಗಾಯತ ಸಮುದಾಯದಲ್ಲಿ ಪ್ರತಿಭಾವಂತರಿದ್ದರೂ, ಅವರಲ್ಲಿ ಅದಮ್ಯ ಚೇತನ, ಉತ್ಸಾಹವಿದ್ದರೂ ಆರ್ಥಿಕ ಸಂಕಷ್ಟದಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ನಮ್ಮ ಸಮುದಾಯದ ಅರ್ಹರು ಎಲ್ಲ ಕ್ಷೇತ್ರದಲ್ಲೂ ಬೆಳೆಯಬೇಕು, ಬೆಳಗಬೇಕು. ಈ ನಿಟ್ಟಿನಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಂಡು ಯಶಸ್ಸು ಪಡೆಯಲು ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿದರು.
ನಮ್ಮ ಸಮುದಾಯದಲ್ಲೂ ಬಡವರಿದ್ದಾರೆ, ನಿರ್ಗತಿಕರಿದ್ದಾರೆ ಹೀಗಾಗಿ ಸಮುದಾಯದ ಎಲ್ಲ ಜಾತಿ, ಉಪಜಾತಿಗಳನ್ನೂ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ. ಇದಕ್ಕಾಗಿ ಪಕ್ಷಾತೀತವಾಗಿ ಸಮುದಾಯದ ಎಲ್ಲರೂ ಪ್ರಯತ್ನಿಸಬೇಕು ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.


