ತುಮಕೂರು: ಜಿಲ್ಲಾ ಪೊಲೀಸ್ ಇಲಾಖೆಯು ಆಯೋಜಿಸಿದ್ದ 2023-24 ನೇ ಸಾಲಿನ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಮಂದಾರಗಿರಿ ಬೆಟ್ಟದ ತಪ್ಪಲಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ವರಿಷ್ಠಾಧಿಕಾರಿಯಾದ ಅಶೋಕ್ ಕೆ. ವಿ. ರವರು ವಹಿಸಿಕೊಂಡಿದ್ದರು.ಮುಖ್ಯ ಅತಿಥಿಯಾಗಿ ತುಮಕೂರು ನಗರಸಭೆಯ ಆಯುಕ್ತೆಯಾದ ಅಶ್ವಿಜಾ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಹತ್ತು ದಿನಗಳ ತರಬೇತಿಯಲ್ಲಿ .22″ ರೈಫಲ್ ನಲ್ಲಿ ಗುರಿ ಅಭ್ಯಾಸ ಮಾಡಿ ಆಯುಧ ನಿರ್ವಹಣೆಯ ತರಬೇತಿಯನ್ನು ಶಿಬಿರಾರ್ಥಿಗಳು ಯಶಸ್ವಿಯಾಗಿ ಪೂರೈಸಿದರು.ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ನಾಗರೀಕರು, ಯುವಕರು,ಮಹಿಳೆಯರು ಶಿಬಿರದಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದರು.
ಭಾನುವಾರ ತುಮಕೂರಿನ ಮಂದಾರಗಿರಿ ಬೆಟ್ಟದ ನಡುವಲ್ಲಿ ಗುಂಡಿನ ಸಪ್ಪಳದೊಂದಿಗೆ ಫೈರಿಂಗ್ ಕ್ಯಾಂಪ್ ಆಯೋಜಿಸಿ ನಂತರ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಪಿ. ಅಶೋಕ್ ಕೆ.ವಿ. ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕಲು ಪ್ರತಿಯೊಬ್ಬರೂ ಸಹಕರಿಸಬೇಕು, ಜೊತೆಗೆ ಸಾರ್ವಜನಿಕರು ತಮ್ಮ ಮನೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ನಡೆದಾಗ ಕೂಡಲೇ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಬಂದೂಕು ತರಬೇತಿ ಪಡೆದ ಶಿಬಿರಾರ್ಥಿಗಳು ಪೋಲಿಸ್ ಇಲಾಖೆ ಜೊತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ನಾಗರಿಕರು ಬಂದೂಕನ್ನು ಯಾವ ಯಾವ ಸಮಯದಲ್ಲಿ ಹೇಗೆ ಉಪಯೋಗಿಸಬೇಕು, ಬಂದೂಕು ಬಳಕೆಯನ್ನು ಕಲಿತವರು ಇಲಾಖೆಯ ಜೊತೆ ಹೇಗಿರಬೇಕು ಹಾಗೂ ಸಮಾಜಕ್ಕೆ ನಿಮ್ಮ ಕೂಡುಗೆ ಏನು ಎಂಬ ಬಗ್ಗೆ ವಿವರಿಸಿದರು.
ಈ ಬಂದೂಕು ತರಬೇತಿ ಶಿಬಿರದಲ್ಲಿ ಜಿಲ್ಲೆಯಾದ್ಯಂತ ಒಟ್ಟು 105 ಜನ ನಾಗರಿಕರು ಭಾಗವಹಿಸಿದ್ದರು. ಒಟ್ಟು 10 ದಿನಗಳ ಅವಧಿಯ ಶಿಬಿದರಲ್ಲಿ ಶಿಬಿರಾರ್ಥಿಗಳಿಗೆ ಆಯುಧಗಳನ್ನು ಹೇಗೆ ಉಪಯೋಗಿಸಬೇಕು,ಗುರಿ ಅಭ್ಯಾಸ,ಆಯುಧಗಳ ಸುರಕ್ಷತೆ ಮತ್ತು ಸ್ವಚ್ಚತೆಗಳ ಬಗ್ಗೆ ಅರಿವು ಮೂಡಿಸಲಾಯಿತು.
22″ ರೈಫಲ್ ಫೈರಿಂಗ್ ನಲ್ಲಿ ಪ್ರಥಮ ಸ್ಥಾನವನ್ನು ಗುಬ್ಬಿ ತಾಲ್ಲೂಕಿನ ಸಂಪಿಗೆ ಗ್ರಾಮದ ಆರ್ ಎನ್ ಉಮೇಶ್ ಪಡೆದರೆ ದ್ವಿತೀಯ ಸ್ಥಾನವನ್ನ ಹುಕ್ಕೋಡಿ ಗ್ರಾಮದ ಶಿವ ಶಂಕರ್ ಪಡೆದರು ತೃತೀಯ ಸ್ಥಾನವನ್ನ ತುಮಕೂರಿನ ಸುರೇಶ್ ಟಿ ಎಂ ಅಲಂಕರಿಸಿದರು ಇವರುಗಳಿಗೆ ತುಮಕೂರು ಪೊಲೀಸ್ ಇಲಾಖೆ ವತಿಯಿಂದ ಬಹುಮಾನ ವಿತರಿಸಲಾಯಿತು..
ಈ ಸಂದರ್ಭದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಡಿವೈಎಸ್ಪಿ ಪರಮೇಶ್ ಕೆ ಎನ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕರಾದ ರಂಗನಾಥ್ ಕೋಟಿ, ಸಶಸ್ತ್ರಗಾರರಾದ ನಾಗರಾಜ್ ಎಂ, ಸಿಬ್ಬಂದಿಗಾಳದ ನಾರಾಯಣ್, ಶಂಕರ್ ಗೌಡ ಪಾಟೀಲ್ ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


