ನ್ಯೂಯಾರ್ಕ್: ಗಾಜಾದಲ್ಲಿ ಇಸ್ರೇಲ್ ಬಾಂಬ್ ದಾಳಿಯನ್ನು ಖಂಡಿಸಿ ಸಾವಿರಾರು ಪ್ರತಿಭಟನಾಕಾರರು ಅಮೆರಿಕದ ನ್ಯೂಯಾರ್ಕ್ ನಲ್ಲಿ ಬೀದಿಗಿಳಿದಿದ್ದಾರೆ. ಅಮೆರಿಕ ಸರ್ಕಾರ ಇಸ್ರೇಲ್ ಪರ ಬ್ಯಾಟ್ ಬೀಸಿದ ಸಂದರ್ಭದಲ್ಲೇ ಈ ಪ್ರತಿಭಟನೆಗಳು ಭುಗಿಲೆದ್ದಿದ್ದು, ಪ್ಯಾಲೆಸ್ತೀನ್ ಸ್ವತಂತ್ರವಾಗಲಿ ಎಂದು ಘೋಷಣೆ ಕೂಗಿದ್ದಾರೆ.
‘ಇಸ್ರೇಲಿ ಆಕ್ರಮಣ ಗಾಜಾದ ಮೇಲೆ ಅಕ್ರಮಣ ಮಾಡುತ್ತಿದೆ. ಪ್ಯಾಲೆಸ್ತೀನ ಪ್ರದೇಶಗಳು ವಿಮೋಚನೆಯಾಗಬೇಕಿದೆ’ ಎಂದು ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿದ್ದಾರೆ.
ಬ್ಯಾರಿಕೇಡ್ ಗಳನ್ನು ಪಕ್ಕಕ್ಕೆ ತಳ್ಳಿರುವ ಯುವ ಪ್ರತಿಭಟನಾಕಾರರು ಇಸ್ರೇಲ್ ಗೆ ಬೆಂಬಲ ನೀಡಿರುವ ಅಮೆರಿಕ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.
ಇಸ್ರೇಲ್ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ. ಪ್ಯಾಲೆಸ್ತೀನ್ ಜನರ ಮೇಲೆ ಬಲತ್ಕಾರ ನಡೆಸಿದೆ. ಬೈಡನ್ ಸರ್ಕಾರ ಇಸ್ರೇಲ್ ಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
‘ಇಸ್ರೇಲ್ ನ ವಸಾಹತುಶಾಹಿ ನಡೆಯು ಈಗ ಕೊನೆಗೊಳ್ಳಬೇಕಿದೆ. ಇಲ್ಲದಿದ್ದರೆ, ಹಿಂಸಾಚಾರದ ಹೆಚ್ಚುತ್ತಲೇ ಇರುತ್ತದೆ. ಪ್ಯಾಲೆಸ್ತೀನ್ ಮೇಲೆ ದಬ್ಬಾಳಿಕೆ ಮುಂದುವರಿಯುತ್ತದೆ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
‘ನದಿಯಿಂದ ಸಮುದ್ರದ ವರೆಗೆ, ಪ್ಯಾಲೆಸ್ತೀನ್ ಮುಕ್ತವಾಗಬೇಕು’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಇದೇ ರೀತಿಯ ಪ್ರತಿಭಟನೆಗಳು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಭುಗಿಲೆದ್ದಿವೆ.


