ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಗಡಿ ನಿಯಂತ್ರಣ ರೇಖೆ ಬಳಿ ನೆಲಬಾಂಬ್ ಸ್ಫೋಟಗೊಂಡಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ. ಗಸ್ತಿನಲ್ಲಿದ್ದ ರೈಫಲ್ ಮನ್ ಗುರುಚರಣ್ ಸಿಂಗ್ ಗಾಯಗೊಂಡಿದ್ದಾರೆ. ಅವರು ಆಕಸ್ಮಿಕವಾಗಿ ಲ್ಯಾಂಡ್ ಮೈನ್ ಮೇಲೆ ಕಾಲಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೌಶೇರಾ ಸೆಕ್ಟರ್ ನ ಫಾರ್ವರ್ಡ್ ಕಲ್ಸಿಯಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗಾಯಗೊಂಡ ಸಿಂಗ್ ಅವರನ್ನು ಸೇನಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಥಮ ಚಿಕಿತ್ಸೆಯ ನಂತರ ಅವರನ್ನು ತಜ್ಞ ಚಿಕಿತ್ಸೆಗಾಗಿ ಉಧಂಪುರದ ಕಮಾಂಡ್ ಆಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಳನುಸುಳುವಿಕೆ ವಿರೋಧಿ ಕಾರ್ಯತಂತ್ರದ ಭಾಗವಾಗಿ ಸೇನೆಯು ಹಲವೆಡೆ ನೆಲಬಾಂಬ್ ಗಳನ್ನು ಹಾಕಿದೆ. ಸಶಸ್ತ್ರ ಭಯೋತ್ಪಾದಕರನ್ನು ತಡೆಯುವುದು ಇದರ ಉದ್ದೇಶವಾಗಿದೆ.
ಆದರೆ ಕೆಲವೊಮ್ಮೆ ಮಳೆಯಿಂದಾಗಿ ನೆಲಬಾಂಬ್ ಗಳು ಸ್ಥಳಾಂತರಗೊಂಡು ಆಕಸ್ಮಿಕ ಸ್ಫೋಟಗಳಿಗೆ ಕಾರಣವಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


