ಮೊದಲ ಅಗ್ನಿವೀರ್ ಸಿಯಾಚಿನ್ ನಲ್ಲಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದು, ಭಾರತೀಯ ಸೇನೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ನವದೆಹಲಿ: ಮೊದಲ ಅಗ್ನಿವೀರ್ ಸಿಯಾಚಿನ್ ನಲ್ಲಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದು, ಭಾರತೀಯ ಸೇನೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.
ಸಿಯಾಚಿನ್ ಯುದ್ಧ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೊದಲ ಅಗ್ನಿವೀರ್ ಗವಾಟೆ ಅಕ್ಷಯ್ ಲಕ್ಷ್ಮಣ್ ಹುತಾತ್ಮರಾಗಿದ್ದು, ಅವರಿಗೆ ಭಾರತೀಯ ಸೇನೆ ಇಂದು (ಭಾನುವಾರ) ಶ್ರದ್ಧಾಂಜಲಿ ಸಲ್ಲಿಸಿದೆ. ಭಾರತೀಯ ಸೇನೆಯ ಫೈರ್ ಆಯಂಡ್ ಫ್ಯೂರಿ ಕಾರ್ಪ್ಸ್ ಮೃತ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ. ಅಕ್ಷಯ್ ಲಕ್ಷ್ಮಣ್ ಅವರ ತ್ಯಾಗಕ್ಕೆ ವಂದನೆ ಸಲ್ಲಿಸುತ್ತೇವೆ. ಈ ದುಃಖದ ಸಮಯದಲ್ಲಿ ಕುಟುಂಬದೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಸಾಮಾಜಿಕ ಮಾಧ್ಯಮ ಟ್ವಿಟರ್ ನಲ್ಲಿ ಭಾರತೀಯ ಸೇನೆ ಪೋಸ್ಟ್ ಮಾಡಿದೆ.
ಸಿಯಾಚಿನ್ನಲ್ಲಿ ಜೂನ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸೇನಾ ಯೋಧ ಮೃತಪಟ್ಟರೆ, ಮೂವರು ಯೋಧರು ಗಾಯಗೊಂಡಿದ್ದರು. ಯೋಧ ಗವಾಟೆ ಅಕ್ಷಯ್ ಲಕ್ಷ್ಮಣ್ ಮಹಾರಾಷ್ಟ್ರದ ಮೂಲದವರಾಗಿದ್ದು, ಅವರ ಸಾವಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಪಡೆಯ ಎಲ್ಲಾ ಶ್ರೇಣಿಯ ಯೋಧರು ಸಂತಾಪ ಸೂಚಿಸಿದರು. ಸುಮಾರು 20,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಹಿಮನದಿಯು ವಿಶ್ವದ ಅತಿ ಎತ್ತರದ ಮಿಲಿಟರಿ ವಲಯ ಎಂದು ಕರೆಯಲ್ಪಡುತ್ತದೆ. ಲಕ್ಷ್ಮಣ್ ಸಾವಿನ ನಿಖರ ಮಾಹಿತಿ ತಕ್ಷಣಕ್ಕೆ ತಿಳಿದುಬಂದಿಲ್ಲ ಈ ಬಗ್ಗೆ ಸೇನೆ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಸಿಯಾಚಿನ್ನಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅಗ್ನಿವೀರ ಗವಟೆ ಅಕ್ಷಯ್ ಲಕ್ಷ್ಮಣ್ ಅವರ ಕುಟುಂಬಕ್ಕೆ ನೀಡಲಾಗುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಭಾರತೀಯ ಸೈನ್ಯ ವಿವರವಾದ ಸ್ಪಷ್ಟನೆ ನೀಡಿದೆ. ಮೃತರ ಕುಟುಂಬದವರಿಗೆ ಪರಿಹಾರವನ್ನು ಸೈನಿಕ ಸೇವೆಯ ಸಂಬಂಧಿತ ನಿಯಮಗಳ ಮೂಲಕವೇ ನೀಡಲಾಗುತ್ತಿದೆ. ಭಾರತೀಯ ಸೈನ್ಯದ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯ ನೀಡಿರುವ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಲಕ್ಷ್ಮಣ್ ಅವರ ದುಃಖಿತ ಕುಟುಂಬಕ್ಕೆ ಬೆಂಬಲವನ್ನು ವ್ಯಕ್ತಪಡಿಸಲಾಗಿದೆ. ʼʼಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಅಪಪ್ರಚಾರಕ್ಕೆ ಸಂಬಂಧಿಸಿ ಈ ಕುರಿತು ಸ್ಪಷ್ಟಪಡಿಸುವುದು ಮುಖ್ಯವಾಗಿದೆ.
ಮೃತ ಅಗ್ನಿವೀರರ ಕುಟುಂಬದವರಿಗೆ 48 ಲಕ್ಷದ ವಿಮಾ ಹಣದ ಮೊತ್ತ (ಇದಕ್ಕೆ ಪ್ರೀಮಿಯಂ ಕಟ್ಟಬೇಕಿಲ್ಲ), 44 ಲಕ್ಷ ರು. ಪರಿಹಾರ, ಅಗ್ನಿವೀರ್ನಿಂದ ಸೇವಾ ನಿಧಿ ಕೊಡುಗೆ (30%) ಮತ್ತು ಸರ್ಕಾರದಿಂದ ಇಷ್ಟೇ ಪ್ರಮಾಣದ ಹೊಂದಾಣಿಕೆಯ ಕೊಡುಗೆ, ಸಂಚಿತ ಬಡ್ಡಿಯೊಂದಿಗೆ ಕೊಡಲಾಗುತ್ತಿದೆʼʼ ಎಂದು ಭಾರತೀಯ ಸೇನೆ ತಿಳಿಸಿದೆ. ಇದಲ್ಲದೆ, ಅಗ್ನಿವೀರ್ ನೀಡಿದ ಸೇವಾ ನಿಧಿಯನ್ನು ಸರ್ಕಾರದಿಂದ ಸಮಾನ ಹೊಂದಾಣಿಕೆಯ ಕೊಡುಗೆ ಮತ್ತು ಬಡ್ಡಿಯೊಂದಿಗೆ ಕುಟುಂಬಕ್ಕೆ ಪಾವತಿಸಲಾಗುತ್ತದೆ. ಮುಂದಿನ ಸಂಬಂಧಿಕರು ಮರಣದ ದಿನಾಂಕದಿಂದ ನಾಲ್ಕು ವರ್ಷಗಳು ಪೂರ್ಣಗೊಳ್ಳುವವರೆಗೆ ಬಾಕಿ ಅವಧಿಗೆ ವೇತನವನ್ನು ಪಡೆಯುತ್ತಾರೆ. ಸಶಸ್ತ್ರ ಪಡೆಗಳ ಯುದ್ಧ ಅಪಘಾತ ನಿಧಿಯಿಂದಲೂ ಕೊಡುಗೆ ಇರುತ್ತದೆ ಎಂದು ಮೂಲಗಳು ತಿಳಿಸಿವೆ.


