ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ತೆಲಂಗಾಣ ಮೂಲದ 19 ವರ್ಷದ ಯುವಕನನ್ನು ಬಂಧಿಸಲಾಗಿದೆ. ಕಳೆದ ವಾರ ಅಂಬಾನಿಗೆ ಮೂರು ಬೆದರಿಕೆ ಇ-ಮೇಲ್‌ಗಳು ಬಂದಿದ್ದವು. ಪ್ರತಿ ಬಾರಿ ಬೆದರಿಕೆ ಸಂದೇಶದಲ್ಲಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಮುಂಬೈ ಗಾಂದೇವಿ ಪೊಲೀಸರು ಗಣೇಶ್ ರಮೇಶ್ ವನಪರ್ಧಿ (19) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 28 ರಂದು ಮೊದಲ ಇಮೇಲ್ ಬಂದಿದೆ.
ಅಕ್ಟೋಬರ್ 31ರಿಂದ ನವೆಂಬರ್ 1ರ ನಡುವೆ ಮತ್ತೆರಡು ಬೆದರಿಕೆ ಸಂದೇಶಗಳು ಬಂದಿದ್ದವು. ತನ್ನನ್ನು ಶಹದಾಬ್ ಖಾನ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರು ಈ ಸಂದೇಶವನ್ನು ಕಳುಹಿಸಿದ್ದಾರೆ. 20 ಕೋಟಿ ನೀಡದಿದ್ದರೆ ಮುಖೇಶ್ ಅಂಬಾನಿ ಅವರನ್ನು ಕೊಲ್ಲುವುದಾಗಿ ಮೊದಲ ಇಮೇಲ್‌ನಲ್ಲಿ ಬೆದರಿಕೆ ಹಾಕಲಾಗಿತ್ತು. ನಂತರದ ಇಮೇಲ್‌ಗಳಲ್ಲಿ ಮೊತ್ತವು 200 ಕೋಟಿ ಮತ್ತು 400 ಕೋಟಿಗಳಿಗೆ ಏರಿತು.


