ಭಾರತ್ ಪೇಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ಜೈನ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಯಿತು. ಇಬ್ಬರನ್ನೂ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ವಶಕ್ಕೆ ತೆಗೆದುಕೊಂಡಿದೆ. ವಂಚನೆ ಪ್ರಕರಣದಲ್ಲಿ ಇಬ್ಬರ ವಿರುದ್ಧ ಲುಕ್ ಔಟ್ ಸುತ್ತೋಲೆ (ಎಲ್ ಒಸಿ) ಹೊರಡಿಸಲಾಗಿತ್ತು.
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಅಶ್ನೀರ್ ಮತ್ತು ಅವರ ಪತ್ನಿ ರಜೆಗಾಗಿ ನ್ಯೂಯಾರ್ಕ್‌ಗೆ ಹೋಗುತ್ತಿದ್ದರು. ಭದ್ರತಾ ತಪಾಸಣೆಗೂ ಮುನ್ನ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಇಒಡಬ್ಲ್ಯು) ಸಿಂಧು ಪಿಳ್ಳೈ ತಿಳಿಸಿದ್ದಾರೆ.
ದಂಪತಿಯನ್ನು ಬಂಧಿಸಿಲ್ಲ. ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಮರಳುವಂತೆ ಮತ್ತು ಮುಂದಿನ ವಾರ ಇಒಡಬ್ಲ್ಯು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ. ಗ್ರೋವರ್, ಅವರ ಪತ್ನಿ ಮತ್ತು ಕುಟುಂಬ ಸದಸ್ಯರು 81.28 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.


