ತುಮಕೂರು: ಮಾಗಡಿ ತಾಲ್ಲೂಕು ಕುದೂರು ಹೋಬಳಿ ಬೆಟ್ಟಹಳ್ಳಿ ಗ್ರಾಮದ ರೈತರಿಗೆ ಸರ್ಕಾರಿ ಸೇವೆ ನೀಡಲು ಮಾಗಡಿ ಸರ್ವೆ ಇಲಾಖೆಯ ಸರ್ವೆಯರ್ ಸಂತೋಷ್ ಎಂಬಾತ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಮುಂಗಡವಾಗಿ 5 ಸಾವಿರ ರೂಪಾಯಿ ಲಂಚ ಪಡೆದುಕೊಂಡಿದ್ದಾನೆ. ಉಳಿದ ಲಂಚದ ಹಣವನ್ನು ತಾಲೂಕು ಕಚೇರಿ ಬಳಿ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ರೈತರಿಗೆ ಸರ್ಕಾರಿ ಸೇವೆ ಒದಗಿಸಲು ಲಂಚಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ತುಮಕೂರು ಭೂಮಿ ವಸತಿ ಸಮಿತಿ, ನೈಜ ಹೋರಾಟಗಾರರ ತಂಡಕ್ಕೆ ನೊಂದ ರೈತರು ವಿಚಾರ ಮುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಹೋರಾಟಗಾರರು ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದರು.
ಖಚಿತ ಮಾಹಿತಿಯ ಮೇರೆಗೆ ರಾಮನಗರ ಲೋಕಾಯುಕ್ತ DSP ಸುಧೀರ್ ರವರ ತಂಡದೊಂದಿಗೆ ಇನ್ಸ್ ಪೆಕ್ಟರ್ ಅನಂತರಾಮ್ ಹಾಗೂ ಸಿಬ್ಬಂದಿ ಆರೋಪಿ ಸರ್ವೆಯರ್ ಸಂತೋಷ್ ನನ್ನು ಬಂಧಿಸಿದ್ದಾರೆ.
ಲೋಕಾಯುಕ್ತ SP ಅಯ್ಯಪ್ಪ ಮಾರ್ಗದರ್ಶನದಲ್ಲಿ ಇತರ ಅಧಿಕಾರಿಗಳು ದಾಳಿ ನಡೆಸಿದ್ದು, ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.