ಉತ್ತರ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರೊಂದು ಹೊತ್ತಿ ಉರಿದ ಪರಿಣಾಮ ಎಂಟು ಮಂದಿ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ಮಗುವೂ ಸೇರಿದೆ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ಕಾರು ಹೊತ್ತಿ ಉರಿದಿದೆ.
ಉತ್ತರ ಪ್ರದೇಶ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದಾಗ 8 ಜನರಿದ್ದ ಮಾರುತಿ ಎರ್ಟಿಕಾ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಟಯರ್ ಸ್ಫೋಟಗೊಂಡಿದ್ದು, ನಿಯಂತ್ರಣ ತಪ್ಪಿದ ಕಾರು ವಿರುದ್ಧ ದಿಕ್ಕಿನಲ್ಲಿದ್ದ ರಸ್ತೆಯಲ್ಲಿ ತಲೆಕೆಳಗಾಗಿ ಪಲ್ಟಿಯಾಗಿದೆ. ತಕ್ಷಣ ಕಾರಿಗೆ ಬೆಂಕಿ ಹೊತ್ತಿಕೊಂಡಿತು.
ಸ್ಥಳಕ್ಕೆ ದೌಡಾಯಿಸಿದ ಜನರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ ಎಂದು ಬರೇಲಿ ಎಸ್ ಎಸ್ ಪಿ ಗುಳೆ ಸುಶೀಲ್ ಚಂದ್ರಭಾನ್ ತಿಳಿಸಿದ್ದಾರೆ. ಅಗ್ನಿಶಾಮಕ ಪಡೆ ಬೆಂಕಿಯನ್ನು ನಂದಿಸಿದರೂ ಯಾರನ್ನೂ ಉಳಿಸಲಾಗಲಿಲ್ಲ.ಕಾರು ಸೆಂಟ್ರಲ್ ಲಾಕ್ ಆಗಿದ್ದರಿಂದ ಪ್ರಯಾಣಿಕರು ಬೇಗನೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ಕ್ರಮ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


