- ಕ್ಯಾಮಲಿನ್ ಉತ್ಪನ್ನಗಳ ಬಳಕೆ ಕುರಿತು ಪ್ರಾಯೋಗಿಕ ಕಲಾ ಕಾರ್ಯಾಗಾರ
ತುಮಕೂರು: ಅಂಗೈಯಲ್ಲಿಯೇ ಪ್ರಪಂಚ ನೋಡುವಂತಹ ಕಾಲದಲ್ಲಿ ನಾವಿದ್ದೇವೆ. ಇವತ್ತು ಶಿಕ್ಷಣ ಎಂಬುದು ಕೂತಲ್ಲಿಯೇ ತಿಳಿದುಕೊಳ್ಳುವ ವ್ಯವಸ್ಥೆ ಇರುವುದರಿಂದ ವಿದ್ಯಾರ್ಥಿಗಳು ವಿಷಯವನ್ನು ಗ್ರಹಿಸಿಕೊಂಡು ಆಳವಾದ ಅಧ್ಯಯನ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹಿರಿಯ ಚಿತ್ರಕಲಾವಿದ ಪಿ.ಎಸ್.ಗ್ರಾಮ್ ಪುರೋಹಿತ್ ಹೇಳಿದರು.

ನಗರದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಹಾಗೂ ಕ್ಯಾಮಲಿನ್ ಕಂಪನಿ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕ್ಯಾಮಲಿನ್ ಉತ್ಪನ್ನಗಳ ಬಳಕೆ ಕುರಿತು ಒಂದು ದಿನದ ಪ್ರಾಯೋಗಿಕ ಕಲಾ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಚಿತ್ರಕಲಾ ಕ್ಷೇತ್ರ ಇತರೆ ಕ್ಷೇತ್ರಗಳಿಗಿಂತ ಭಿನ್ನವಾಗಿದೆ. ಈ ಕ್ಷೇತ್ರಕ್ಕೆ ತನ್ನದೇ ಆದ ಮೌಲ್ಯವನ್ನು ತಂದುಕೊಡುವ ಕೆಲಸ ಕಲಾ ವಿದ್ಯಾರ್ಥಿಗಳು ಹಾಗೂ ಕಲಾವಿದರು ಮಾಡಬೇಕು. ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಮುಂದುವರಿಯಲು ಕಾಲೇಜಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಸರ್ಕಾರಗಳು ಒದಗಿಸಬೇಕು ಎಂದು ಮನವಿ ಮಾಡಿದರು.

ನಿವೃತ್ತ ಶಿಕ್ಷಕರಾದ ಎಂ.ಎನ್.ಸುಬ್ರಮಣ್ಯ ಮಾತನಾಡಿ, ಕಲಾ ವಿದ್ಯಾರ್ಥಿಗಳು ಕಲಾಕೃತಿಗಳ ವೀಕ್ಷಣೆಯತ್ತ ಹೆಚ್ಚು ಮುಖಮಾಡಬೇಕು. ಕಲೆಗೆ ಸಂಬಂಧಿಸಿದ ವಿಚಾರಗಳಲ್ಲಿ ಹೆಚ್ಚು ಸಕ್ರಿಯರಾಗಿ ವಿಷಯವನ್ನು ಗ್ರಹಿಸಿಕೊಂಡಾಗ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಪ್ರಾಚಾರ್ಯ ಸಿ.ಸಿ.ಬಾರಕೇರ ಅವರು, ವಿದ್ಯಾರ್ಥಿಗಳು ಹಿರಿಯ ಕಲಾವಿದರ ಕಲಾಕೃತಿಗಳನ್ನು ನೋಡುವುದರ ಜೊತೆಗೆ ಕಲೆಯ ಕುರಿತು ತಿಳಿದುಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಇಂದು ಕ್ಯಾಮಲಿನ್ ಕಂಪನಿಯವರು ಬಣ್ಣ, ಬ್ರೆಶ್, ಪ್ಯಾಲೇಟ್ ಹಾಗೂ ಕ್ಯಾನ್ವಸ್ ಗಳನ್ನು ಹೇಗೆ ಬಳಸಬೇಕು ಮತ್ತು ಯಾವುದು ಸೂಕ್ತ ಎಂಬುದು ತಿಳಿಸುವ ಉದ್ದೇಶ ಆಗಿರುತ್ತದೆ ಎಂದರು.

ಕ್ಯಾಮಲಿನ್ ಉತ್ಪನ್ನಗಳ ನಿರ್ವಾಹಕರಾದ ಡಿ.ಜೈಕುಮಾರ ಅವರು ಕ್ಯಾಮಲಿನ್ ಕಂಪನಿಯಲ್ಲಿ ತಯಾರಾಗುವ ಕಲಾ ಸಾಮಗ್ರಿಗಳ ಕುರಿತು ಉಪನ್ಯಾಸ ನೀಡಿದರು
ಕಾರ್ಯಕ್ರಮದಲ್ಲಿ ಕ್ಯಾಮಲಿನ್ ಉತ್ಪನ್ನಗಳ ಮಾರಾಟ ನಿರ್ವಾಹಕರಾದ ಜಿ.ಬಿ.ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಟರಾಜು ಜಿ.ಎಲ್, ಉಪನ್ಯಾಸಕರಾದ ರಂಗಸ್ವಾಮಿ ಆರ್. ಡಾ.ಸುರೇಂದ್ರನಾಥ್ ಡಿ.ಆರ್, ಸತ್ಯನಾರಾಯಣ ಟಿ.ಎಸ್, ಡಾ.ಶ್ವೇತ ಡಿ.ಎಸ್., ಡಾ.ಸಂತೋಷಕುಮಾರ್ ನಾಗರಾಳ ಹಾಗೂ ವಿದ್ಯಾರ್ಥಿಗಳು ಇದ್ದರು.















