ಹಾವೇರಿ: ಹೆಂಡತಿ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲ ನಿವಾಸಿ ಪತಿ ರೇವಣಪ್ಪ ಆರೋಪಿಯಾಗಿದ್ದಾನೆ. ಪವಿತ್ರ ಮೃತ ದುರ್ದೈವಿ.
ಮದುವೆ ಆಗಿ ಆರಂಭದಲ್ಲಿ ಎಲ್ಲವೂ ಚೆನ್ನಾಗಿ ಇತ್ತು. ಆದರೆ, ಬರು ಬರುತ್ತಾ ಮದ್ಯದ ದಾಸನಾದ ರೇವಣಪ್ಪ ನಿತ್ಯ ಕುಡಿದ ಅಮಲಿನಲ್ಲಿ ಜಗಳ ವಾಡುತ್ತಿದ್ದನಂತೆ. ನೆರೆ-ಹೊರೆಯವರ ಜೊತೆ ಮಾತನಾಡಿದ್ರು, ಸಂಬಂಧ ಕಲ್ಪಿಸಿ ಜಗಳ ವಾಡುತ್ತಾ ಕಿರಿಕಿರಿ ಮಾಡುತ್ತಿದ್ದ. ಆದ್ರೆ, ಈ ಎಲ್ಲವನ್ನು ಸಹಿಸಿಕೊಂಡು ಕಳೆದ ಐದು ವರ್ಷದಿಂದ ಪವಿತ್ರ ಸಂಸಾರ ನಿಬಾಯಿಸಿಕೊಂಡು ಬಂದಿದ್ದಳು.
ಪವಿತ್ರಾ ಹಸಿ ಬಾಣಂತಿ ನಿನ್ನೆ ರಾತ್ರಿ ಐದು ತಿಂಗಳ ಕಂದಮ್ಮನನ್ನು ಕಂಕಳಲ್ಲಿ ಕೂರಿಸಿಕೊಂಡು ಏಕಾದಶಿ ಹಿನ್ನೆಲೆ ಶಿವನ ದರ್ಶನಕ್ಕೆ ದೇವಸ್ಥಾನಕ್ಕೆ ಹೋಗಿದ್ದಳು. ತನ್ನ ಗಂಡ ತನ್ನ ತವರು ಮನೆಗೆ ಬಂದಿದ್ದಾನೆ ಎಂದು ಸುದ್ದಿ ಕೇಳಿದ ತಕ್ಷಣ ಪವಿತ್ರ, ನನ್ನ ಗಂಡ ನನ್ನ ಮಕ್ಕಳನ್ನು ಎತ್ತಿಕೊಂಡು ಮುದ್ದಾಡುತ್ತಾನೆ ಎಂಬ ಆಸೆಯಿಂದ ಧಾವಂತದಲ್ಲಿ ಮನೆಗೆ ಬಂದಿದ್ದಳು. ಆದ್ರೆ, ಪಾಪಿ ಪತಿ ಅನುಮಾನ ಎಂಬ ಭೂತವನ್ನು ತಲೆಗೆ ಹಚ್ಚಿಕೊಂಡು ಕುಡಿದ ಮತ್ತಿನಲ್ಲಿ ಆಕೆಯ ಪೋಷಕರ ಎದುರೇ ಕೊಲೆ ಮಾಡಿ ಬಿಟ್ಟಿದ್ದಾನೆ.


