ಕನೌಜ್: ರೌಡಿ ಶೀಟರ್‌ನನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಆರೋಪಿಯ ಕುಟುಂಬಸ್ಥರು ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದ ವಿಷುಂಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ಪೊಲೀಸ್ ಪೇದೆ ಸಚಿನ್ ರಾಠಿ (28) ಅವರಿಗೆ ಗುಂಡು ತಗುಲಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಿತ್ ಕುಮಾರ್ ಆನಂದ್ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಪೊಲೀಸರು ಆರೋಪಿ ಅಶೋಕ್ ಕುಮಾರ್ ಅಲಿಯಾಸ್ ಮುನ್ನಾ ಯಾದವ್ ಮತ್ತು ಆತನ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅವರನ್ನೂ ಕನೌಜ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಶೋಕ್ ಕುಮಾರ್ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ 20 ಪ್ರಕರಣಗಳು ದಾಖಲಾಗಿತ್ತು. ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಇದೆ ಎಂದು ಎಸ್ಪಿ ತಿಳಿಸಿದ್ದಾರೆ.
ಅಶೋಕ್ ಮನೆಯಲ್ಲಿರುವ ವಿಚಾರ ತಿಳಿದು ಪೊಲೀಸರು ಆತನ ಮನೆಗೆ ತೆರಳಿದ್ದರು. ಈ ವೇಳೆ ಅಶೋಕ್ ಕುಮಾರ್, ಆತನ ಪತ್ನಿ ಮತ್ತು ಮಗ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆನಂದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.


