ಬೀದರ್: ಜಿಲ್ಲೆಯ Anti Narcotics Squad ವತಿಯಿಂದ ಮಂಠಾಳದಲ್ಲಿ 57 ಲಕ್ಷಕ್ಕೂ ಅಧಿಕ ಮೌಲ್ಯದ ಮಾದಕ ಪದಾರ್ಥ ಓಪಿಯಮ್ ಪೊಪಿ ಸ್ಟ್ರಾ ಮತ್ತು ಒಂದು ಕಂಟೈನರ್ ವಾಹನ ಜಪ್ತಿ ಮಾಡಲಾಗಿದೆ.
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಡಿ.25ರಂದು ನ್ಯಾಮೆಗೌಡ, ಡಿ.ಎಸ್ಪಿ ಹುಮನಾಬಾದ ರವರ ನೇತೃತ್ವದಲ್ಲಿ ಕೃಷ್ಣಕುಮಾರ ಪಾಟೀಲ್, ಸಿ.ಪಿ.ಐ ಮಂಠಾಳ ವೃತ್ತ ರವರು ತಮ್ಮ ತಂಡದ ಶಿವಾನಂದ, ಅನೀಲ, ಪ್ರತಾಪ, ಚಾಲಕ ತಾತೇರಾವ್ ಮತ್ತು ಮಂಠಾಳಾ ಪೊಲೀಸ್ ಠಾಣೆಯ ವೆಂಕಟ್, ಶಿವಕುಮಾರ, ರವರನ್ನೊಳಗೊಂಡ ತಂಡವು ಮಹಾರಾಷ್ಟ್ರ ರಾಜ್ಯದಿಂದ ಮದ್ರಾಸಕ್ಕೆ ರಾಷ್ಟ್ರೀಯ ಹೆದ್ದಾರಿ-65 ರಿಂದ ಮನ್ನಳ್ಳಿ ಬಾರ್ಡರ ಮೂಲಕ ಸರಕಾರದಿಂದ ಯಾವುದೇ ಅನುಮತಿ ಇಲ್ಲದೇ ಅಕ್ರಮವಾಗಿ ಓಪಿಯಮ್ ಪೊಪಿ ಸ್ಟ್ರಾ ಮಾದಕ ಪದಾರ್ಥ ಸಾಗಿಸುತ್ತಿರುವ ಮಾಹಿತಿಯಂತೆ, ಮನ್ನಳ್ಳಿ ಬಾರ್ಡರದ ಅಬಕಾರಿ ಚೆಕ್ ಪೋಸ್ಟ್ ಹತ್ತಿರ ಕಂಟೇನರನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಕಂಟೇನರ್ ನಲ್ಲಿದ್ದ 17.50 ಕೆ.ಜಿ ಓಪಿಯಮ್ ಪೊಪಿ ಸ್ಟ್ರಾ ಮಾದಕ ಪದಾರ್ಥ ಜಪ್ತಿ ಮಾಡಿದ್ದಾರೆ, ಜೊತೆಗೆ, ಆರೋಪಿಯ ಬಳಿಯಿದ್ದ ಒಂದು ಮೊಬೈಲ್ ಮತ್ತು ನಗದು ಸೇರಿದಂತೆ ಒಟ್ಟು 57,56,000 ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಪ್ರಶಂಸನಾ ಪತ್ರದೊಂದಿಗೆ ಬಹುಮಾನ ನೀಡಿ ಶ್ಲಾಘಿಸಲಾಗಿದೆ.
ವರದಿ: ಅರವಿಂದ ಮಲ್ಲಿಗೆ


