ಮಧುಗಿರಿ: ವಿವಾಹ ನೋಂದಣಿ ಪತ್ರ ನೀಡಲು ಅರ್ಜಿದಾರನಿಂದ ಲಂಚ ಸ್ವೀಕರಿಸುತ್ತಿರುವ ಉಪ ನೋಂದಣಾಧಿಕಾರಿಗಳ ಕಚೇರಿ ಸಿಬ್ಬಂದಿಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮಧುಗಿರಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಎರಡು ದಿನದ ಹಿಂದೆ ವಿವಾಹ ನೋಂದಣಿ ಮಾಡಿಕೊಂಡ ಅನಾಮಯ ಅರ್ಜಿದಾರರು ವಿವಾಹ ನೋಂದಣಿ ಪತ್ರ ಪಡೆಯಲು ಸಿಬ್ಬಂದಿ ರತ್ನಮ್ಮ ಬಳಿ ತೆರಳಿದಾಗ, ರತ್ನಮ್ಮ ಅರ್ಜಿದಾರರಿಗೆ 300 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದು, ಲಂಚದ ಹಣವನ್ನು ಅರ್ಜಿದಾರರಿಂದ ಸ್ವೀಕರಿಸುವ ದೃಶ್ಯವನ್ನು ಸ್ವತಃ ಅರ್ಜಿದಾರರೇ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಉಪನೋಂದಣಾಧಿಕಾರಿಗಳು ಇದ್ದು ಇಲ್ಲದಂತಾಗಿದೆ:
ಮಧುಗಿರಿ ಉಪನೋಂದಣ ಕಚೇರಿಯಲ್ಲಿ ನೋಂದಣಾಧಿಕಾರಿಗಳು ಇದ್ದು ಸಹ ಇಲ್ಲದಂತಾಗಿದೆ. ಏಕೆಂದರೆ ಕಚೇರಿಯ ಸಿಬ್ಬಂದಿಗಳು ಸಾರ್ವಜನಿಕರಿಂದ ಪ್ರತ್ಯೇಕ ಕೆಲಸಕಾರ್ಯಗಳಿಗೆ ಇಂತಿಷ್ಟು ಹಣದ ಬೇಡಿಕೆ ಒಡ್ಡುವುದು ಸರ್ವೇಸಾಮಾನ್ಯವಾಗಿದೆ ಮತ್ತು ಅರ್ಜಿದಾರರು ಹಣ ನೀಡದಿದ್ದರೆ ಕೆಲಸ ಕಾರ್ಯ ಮಾಡದೆ, ಅರ್ಜಿದಾರರನ್ನು ಪದೇ ಪದೇ ಕಚೇರಿಗೆ ಅಲೆದಾಡಿಸುವ ಕೆಲಸ ಮಾಡ್ತಿದ್ದಾರೆ.
ಈ ವಿಚಾರವಾಗಿ ಹಲವಾರು ಬಾರಿ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ವಿಚಾರವಾಗಿ ಕ್ರಮ ಕೈಗೊಳ್ಳುತ್ತಾರೋ, ಇಲ್ಲವೋ ಎಂದು ಕಾದು ನೋಡಬೇಕಾಗಿದೆ.
ವರದಿ: ಅಬಿದ್ ಮಧುಗಿರಿ