ಕೆಂಪು ಸಮುದ್ರ, ಏಡನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಮೂಲಕ ಸಾಗುವ ಸರಕು ಹಡಗುಗಳ ಮೇಲೆ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ಮಧ್ಯ ಮತ್ತು ಉತ್ತರ ಅರಬ್ಬೀ ಸಮುದ್ರದಲ್ಲಿ ಕಣ್ಗಾವಲು ಹೆಚ್ಚಿಸಿದೆ. ನೌಕಾಪಡೆಯು ಸರಕು ಹಡಗುಗಳಿಗೆ ಭದ್ರತೆಯನ್ನು ಒದಗಿಸಲು ವಿಧ್ವಂಸಕ ಮತ್ತು ಯುದ್ಧನೌಕೆಗಳನ್ನು ಒಳಗೊಂಡ ಕಾರ್ಯ ಗುಂಪುಗಳನ್ನು ನಿಯೋಜಿಸಿದೆ.
P-18, ಲಾಂಗ್ ರೇಂಜ್ ಮ್ಯಾರಿಟೈಮ್ ಪೆಟ್ರೋಲ್ ಏರ್‌ಕ್ರಾಫ್ಟ್ ಮತ್ತು ರಿಮೋಟ್ಲಿ ಪೈಲಟೆಡ್ ಏರ್ ಕ್ರಾಫ್ಟ್ (ಆರ್ ಎಪಿ) ಗಳನ್ನು ಸಹ ಭದ್ರತೆಗಾಗಿ ನಿಯೋಜಿಸಲಾಗಿದೆ. ನೌಕಾಪಡೆಯ ಭದ್ರತಾ ಕಾರ್ಯಾಚರಣೆಗಳು ಕೋಸ್ಟ್ ಗಾರ್ಡ್ ಸಹಯೋಗದೊಂದಿಗೆ ಇವೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಅರಬ್ಬಿ ಸಮುದ್ರ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ನೌಕಾ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಅಂತಾರಾಷ್ಟ್ರೀಯ ಹಡಗು ಮಾರ್ಗಗಳ ಮೂಲಕ ಸಾಗುವ ಸರಕು ಹಡಗುಗಳ ಮೇಲೆ ಹಲವಾರು ದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ, ನೌಕಾಪಡೆಯು ಭದ್ರತೆಯನ್ನು ಬಿಗಿಗೊಳಿಸಿದೆ. ಅರಬ್ಬಿ ಸಮುದ್ರದಲ್ಲಿ ಎಂವಿ ಕೆಮ್ ಪ್ಲುಟೊ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದ ನಂತರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.


