ಪಾವಗಡ: ತಾಲೂಕಿನಲ್ಲಿ ಇರುವಂತಹ ಸೋಲಾರ್ ಕಂಪನಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಾವತಿಸಬೇಕಾದಂತಹ ತೆರಿಗೆ ಎಲ್ಲ ಪಾವತಿಸದೆ ವಂಚಿಸುತ್ತಿದ್ದು, ಇವುಗಳ ವಿರುದ್ಧ ಆಡಳಿತ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಎಎಪಿ ಮುಖಂಡ ರಾಮಾಂಜಿನಪ್ಪ ಒತ್ತಾಯಿಸಿದರು.
ಪಾವಗಡ ಪಟ್ಟಣದ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾವಗಡ ಸೋಲಾರ್ ಪಾರ್ಕ್ ವಿಚಾರದಲ್ಲಿ ಸ್ಥಳೀಯ ಮಟ್ಟದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ. ಒಂದೊಂದು ಸೋಲಾರ್ ಕಂಪನಿ, ಲಕ್ಷಾಂತರ ರೂಪಾಯಿ ತೆರಿಗೆ ಹಣವನ್ನು ಬಾಕಿ ಉಳಿಸಿಕೊಂಡಿರುವುದರಿಂದ ಪಂಚಾಯತಿ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ, ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ, ಈಗಾಗಲೇ ಪಾವಗಡ ತಾಲೂಕಿನ ತಿರುಮಣಿ , ನಾಗಲಮಡಿಕೆ, ವಳ್ಳೂರು ಸೇರಿದಂತೆ ಯಾವ ಯಾವ ಗ್ರಾಮ ಪಂಚಾಯತಿಗಳಲ್ಲಿ ಖಾಸಗಿ ಸೋಲಾರ್ ಕಂಪನಿಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಮುಂದಾದಾಗ ಯಾವ ಗ್ರಾಮ ಪಂಚಾಯಿತಿನಲ್ಲೂ ಸಮರ್ಪಕವಾದ ಉತ್ತರ ಲಭಿಸುತ್ತಿಲ್ಲ ಎಂದು ಅವರು ದೂರಿದರು.
ಪಾವಗಡ ತಾಲೂಕು ಹಾಗೂ ತುಮಕೂರು ಜಿಲ್ಲಾಮಟ್ಟದ ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಕ್ರಮವಹಿಸಿ ಖಾಸಗಿ ಸೋಲಾರ್ ಕಂಪನಿಗಳಿಂದ ಬರಬೇಕಿರುವಂತಹ ತೆರಿಗೆ ಹಣವನ್ನು ವಸೂಲಿ ಮಾಡಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ